ಲಂಚ ಪ್ರಕರಣ: ಶಿರಸಿಯ ಈ ಹಿಂದಿನ ಎಸಿ, ಹುಣಸೂರಿನ ಹಾಲಿ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ..!

ಹುಣಸೂರು ಉಪ ವಿಭಾಗಾಧಿಕಾರಿಯಾಗಿರೋ ಹಾಗೂ ಈ ಹಿಂದೆ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ನಡೆಸಿದ ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ.

ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರಲ್ಲಿರುವ 4 ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿದ ಪ್ರಕರಣ ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣದಲ್ಲಿ ಅನುಕೂಲಕರ ತೀರ್ಪು ನೀಡುವ ಸಲುವಾಗಿ ಬೆಂಗಳೂರಿನ ನಿವಾಸಿ ಡಾ. ರೂಪಾ ಅವರಿಂದ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಆರೋಪದ ಪ್ರಕಾರ, ಮೊದಲ ಹಂತದಲ್ಲಿ ₹5 ಲಕ್ಷವನ್ನು ಈಗಾಗಲೇ ಸ್ವೀಕರಿಸಲಾಗಿತ್ತು. ಉಳಿದ ₹5.50 ಲಕ್ಷ ಹಣವನ್ನು ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಾವ್ಯಾರಾಣಿ ಮತ್ತು ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಉಪವಿಭಾಗಾಧಿಕಾರಿಯ ನಿವಾಸದಲ್ಲೇ ಹಣ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಈ ದಾಳಿಯಲ್ಲಿ ತನಿಖಾಧಿಕಾರಿ ರವಿಕುಮಾರ್, ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ದಿನಕರ ಶೆಟ್ಟಿ, ಇನ್‌ಸ್ಪೆಕ್ಟರ್ ವೀಣಾ ನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಲೋಕಾಯುಕ್ತ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.