ಕಾರವಾರ; ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಪ್ರತಿದಿನದ ಮೆನು ಪ್ರಕಾರ ಗುಣಮಟ್ಟದ ಮತ್ತು ಶುಚಿಯಾದ ಆಹಾರ ವಿತರಿಸುವಂತೆ ಮತ್ತು ಕಳಪೆ ಆಹಾರವನ್ನು ಸರಬರಾಜು ಮಾಡುವ ಗುತ್ತಿಗೆದಾರರನ್ನು ಬದಲಾಯಿಸುವಂತೆ ಕ್ರಿಮ್ಸ್ ನ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್. ಕೃಷ್ಣ ಸೂಚನೆ ನೀಡಿದರು.

ಅವರು ಮಂಗಳವಾರ ಕ್ರಿಮ್ಸ್ ಗೆ ಭೇಟಿ ನೀಡಿ ರೋಗಿಗಳಿಗೆ ವಿತರಿಸುವ ಆಹಾರದ ಪರಿಶೀಲನೆ ನಡೆಸಿ ಮಾತನಾಡಿದರು. ಕ್ರಿಮ್ಸ್ ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಮೆನು ಪ್ರಕಾರ ಇಂದು ಮೊಟ್ಟೆ ವಿತರಿಸಬೇಕಾಗಿದ್ದು, ಮೊಟ್ಟೆ ವಿತರಿಸದ ಕುರಿತು ಗರಂ ಆದ ಅವರು, ಅತ್ಯಂತ ಚಿಕ್ಕ ಕೊಠಡಿಯಲ್ಲಿ ಆಹಾರವನ್ನು ಸಿದ್ದಪಡಿಸುತ್ತಿದ್ದು, ಈ ಪ್ರದೇಶದಲ್ಲಿ ಸ್ವಚ್ಚತೆಯ ಕೊರತೆಯೂ ಇರುವುದನ್ನು ಗಮನಿಸಿದ ಅವರು ಆಹಾರ ತಯಾರಿಕಾ ಸ್ಥಳವನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಮತ್ತು ಆಹಾರ ತಯಾರಿಕಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯನ್ನು ಒದಗಿಸುವಂತೆ ಸೂಚಿಸಿದರು.
ಚಪಾತಿ ತಿನ್ನಲು ಯೋಗ್ಯವಿಲ್ಲ..!
ನಂತರ ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿದ ಅವರು, ಈ ದಿನ ಬೆಳಗ್ಗೆ ಮತ್ತು ನೆನ್ನೆ ರಾತ್ರಿ ಊಟ ಮತ್ತು ಉಪಹಾರ ಒದಗಿಸಿರುವ ಕುರಿತು ರೋಗಿಗಳಿಂದಲೇ ಮಾಹಿತಿ ಪಡೆದು ಹೊರ ನಡೆಯುವ ಸಂದರ್ಭದಲ್ಲಿ ಇಂದಿನ ಮಧ್ಯಾಹ್ನ ಆಹಾರ ವಿತರಣೆಯ ಆಹಾರ ಆಗಮಿಸಿದ್ದನ್ನು ಪರಿಶೀಲಿಸಿ, ಕಳಪೆ ಗುಣಮಟ್ಟದ ಚಪಾತಿ ವಿತರಣೆ ಆಗುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಕ್ರಿಮ್ಸ್ ನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಈ ಚಪಾತಿಯನ್ನು ಆಸ್ಪತ್ರೆಯ ಆಹಾರ ಕೊಠಡಿಯಲ್ಲಿ ಸಿದ್ದಪಡಿಸದೇ ಹೊರಗಿನಿಂದ ತಂದು ವಿತರಿಸುತ್ತಿದ್ದು, ಈ ಚಪಾತಿ ಆರೋಗ್ಯವಂತರೇ ಸೇವಿಸಲು ಯೋಗ್ಯವಿಲ್ಲ, ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರತಿದಿನ ಇಲ್ಲಿನ ಆಹಾರವನ್ನು ಸೇವಿಸಿದಲ್ಲಿ ಗುಣಮಟ್ಟದಲ್ಲಿ ಸುಧಾರಣೆ ಆಗಲಿದ್ದು, ಆಹಾರದ ಗುಣಮಟ್ಟದ ಕುರಿತಂತೆ ಆಗಾಗ್ಗೆ ಆಹಾರದ ಮಾದರಿಯನ್ನು ತೆಗೆದು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಅಪೌಷ್ಟಿಕತೆಯ ಮಕ್ಕಳಿಗೆ..!
ಆಸ್ಪತ್ರೆಯ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಪೌಷ್ಠಿಕ ಪುನಃಶ್ಚೇತನ ಕೇಂದ್ರದಲ್ಲಿ ದಾಖಲಾಗುವ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರದ ಕುರಿತು ಸೂಕ್ತ ವಿವರಣೆ ಮತ್ತು ಕೇಸ್ ಶೀಟ್ ಸಮರ್ಪಕವಾಗಿ ದಾಖಲಿಸಿದ ವೈದ್ಯರಿಗೆ ನೋಟಿಸ್ ನೀಡುವಂತೆ ತಿಳಿಸಿದ ಅವರು, ಈ ಕೇಂದ್ರದಲ್ಲಿ ದಾಖಲಾಗುವ ಮಗು ಮತ್ತು ಪೋಷಕರಿಗೆ ಒಟ್ಟು ರೂ.370 ದಿನಗೂಲಿ ನಷ್ಠ ಪರಿಹಾರ ದೊರೆಯಲಿದ್ದು ಮತ್ತು ಈ ಕೇಂದ್ರದಲ್ಲಿ ದೊರೆಯುವ ಇತರೇ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಯೋಜನೆಯ ಪ್ರಯೋಜನ ದೊರಕಿಸಬೇಕು ಎಂದರು.
ಅಂಗನವಾಡಿಗೂ ಭೇಟಿ..!
ನಂತರ ಗಾಂಧೀ ನಗರದ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳಿಗೆ ನೀಡುವ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಪರಿಶೀಲಿಸಿದ ಅವರು, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರ ಸರಬರಾಜು ಕುರಿತಂತೆ ಫಲಾನುಭವಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಚಿತಪಡಿಸಿಕೊಂಡರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯ ಮಾರುತಿ ಎಂ ದೊಡ್ಡಲಿಂಗಣ್ಣನವರ, ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರರಾವ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ ಉಪನಿರ್ದೇಶಕ ವಿರೂಪಕ್ಷ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್, ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕ್ಕ ಮಾದರ, ಜಿಲ್ಲಾಧಿಕಾರಿ ಕಚೇರಿಯ ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
