ಇದು ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಯ “ಬಯಲ ದಂಧೆ?”, ಅಲ್ಲಿ ಬರಗೆಟ್ಟವರ ಭಂಡತನಕ್ಕೆ ಬಲಿಯಾಗಿದ್ದು ಸಾಲು ಸಾಲು ಮರ..!

ಅಧಿಕಾರಿಗಳು ನಿರ್ಲಜ್ಯರಾದ್ರೆ ಇಲಾಖೆಗಳು ಹೇಗೇಲ್ಲ ಬೆತ್ತಲಾಗ್ತವೆ ಅನ್ನೋದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಂತಾಗಿದೆ. ಇದು ಮುಂಡಗೋಡ ಅರಣ್ಯ ಇಲಾಖೆಯ ಸನ್ಮಾನ್ಯ ಅಧಿಕಾರಿಯೊಬ್ಬರ ಆಸೆಬುರುಕತನವೋ..? ಅಧಿಕಾರದ ಅಹಂಕಾರವೋ..? ನಮಗಂತೂ ಗೊತ್ತಿಲ್ಲ, ಬಹುತೇಕ ಚಕ್ಕಂಬಕ್ಕಳ ಹಾಕೊಂಡು ಅಮೇದ್ಯಕ್ಕಾಗಿ ವನದೇವಿಯನ್ನೇ ಬಲಿಕೊಟ್ಟುಬಿಟ್ರಾ ಅನ್ನೊ ಪ್ರಶ್ನೆ ಏಳುವಂತಾಗಿದೆ. ಅಸಲು, ಅಲ್ಲಿ ಸಿಪ್ಪೆ ಸುಲಿಸಿಕೊಂಡು ಬಿದ್ದಿರೊ ವನದೇವಿಯ ಕರುಳ ಬಳ್ಳಿಗಳನ್ನು ನೋಡಿಬಿಟ್ರೆ ಪರಿಸರ ಪ್ರಿಯರಿಗೆ ಕಣ್ಣಲ್ಲಿ ನೀರು ಬರದೇ ಇರಲ್ಲ..!

ಅವು ಬರೋಬ್ಬರಿ 17 ತುಂಡುಗಳು..!
ಅಂದಹಾಗೆ, ಮುಂಡಗೋಡ ತಾಲೂಕಿನ ಅದೊಂದು ಹಳ್ಳಿಯ ಮಾಲ್ಕಿ ಜಮೀನಿನಲ್ಲಿ ಬರೋಬ್ಬರಿ 17 ಅಕೇಶಿಯಾ ಜವಾರಿ ಮರದ ತುಂಡುಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗಿದೆ ಅನ್ನೊ ಬಾತ್ಮಿ ಇಡೀ ಪಟ್ಟಣದಾದ್ಯಂತ ಹರಿದಾಡ್ತಿದೆ. ಹಾಗೆ ಕಡಿದು ಸಾಗಿಸಿರೋ ಕಟ್ಟಿಗೆಗಳು ಇದೀಗ ಮುಂಡಗೋಡ ಪಟ್ಟಣದ ಅದೊಂದು ಕಟ್ಟಿಗೆ ಅಡ್ಡೆಯಲ್ಲಿ ಸಿಪ್ಪೆ ಸುಲಿದುಕೊಂಡು ಬಿದ್ದಿವೆ. ಆದ್ರೆ, ಅವೇಲ್ಲ ಆ ಅರಣ್ಯ ಅಧಿಕಾರಿಯ ಕಣ್ಗಾವಲಿನಲ್ಲೇ ಜೀವ ಕಳೆದುಕೊಂಡು ಖಾಸಗೀ ಅಡ್ಡೆಯಲ್ಲಿ ಅಂಗಾತ ಮಲಗಿಬಿಟ್ಟಿವೆ ಅನ್ನೋದೇ ಬಹುದೊಡ್ಡ ನಾಚಿಗ್ಗೇಡು..!

ಜಸ್ಟ್ RTC ಯಲ್ಲೇ ಪರ್ಮಿಶನ್..!
ಅಸಲು, ಇಲ್ಲಿ ಅದೊಬ್ಬ DyRFO ಸಾಹೇಬ್ರು ಈ ಇಡೀ ಕೇಸಲ್ಲಿ ಅದ್ಯಾವ ಗುಂಗಿನಲ್ಲಿ ಬಿದ್ದಿದ್ರೋ ಅಥವಾ, ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಜಸ್ಟ್ RTC ಮೂಲಕವೇ ಆ “ಮಾಲು” ಕತ್ತರಿಸಿ ಹಾಕಲು ಪರ್ಮಿಶನ್ ಕೊಟ್ಟಿದ್ದಾರೆ ಅನ್ನೋದು ಸದ್ಯದ ಆರೋಪ. ಇಲ್ಲಿ ಅಕೇಶಿಯಾ ಹೈಬ್ರೀಡ್ ಅಂತಾ ಹೇಳಿ ಅಪ್ಪಟ ಅಕೇಶಿಯಾ ಜವಾರಿ ಕಟ್ಟಿಗೆಯ 17 ತುಂಡುಗಳನ್ನ ಕಡಿದು ತಂದಿಡಲಾಗಿದೆಯಂತೆ.
ಹಾಗೆ ನೋಡಿದ್ರೆ, ಹೈಬ್ರೀಡ್ ತಳಿಯ ಅಕೇಶಿಯಾ ಕಟ್ಟಿಗೆ ಇದ್ರೆ ಹಾಗೆ RTC ಮೂಲಕವೇ ಒಪ್ಪಿಗೆ ಕೊಡಬಹುದಂತೆ. ಹಾಗಂತ ಇಲಾಖೆಯ ಕಾನೂನು ಹೇಳತ್ತೆ. ಆದ್ರೆ, ಇಲ್ಲಿನ ಮಹಾನುಭಾವ ಆಫೀಸರ್ರು, ಅದೇಲ್ಲವನ್ನೂ ಗಾಳಿಗೆ ತೂರಿ ಜಸ್ಟ್ RTC ಮೇಲೆಯೇ “ಏನಾದ್ರೂ ಮಾಡ್ಕೊಳ್ಳಿ” ಅಂತಾ
ಆ ಅಕೇಶಿಯಾ ಜವಾರಿ ಮರಗಳನ್ನು ಕಡಿಯಲು ಪರ್ಮಿಶನ್ ಕೊಟ್ಟು ಬಿಟ್ಟಿದ್ದಾರೆ. ಪರಿಣಾಮ ಬರೋಬ್ಬರಿ 17 ತುಂಡುಗಳು ಈಗ ನಿರ್ಜೀವವಾಗಿ ಸತ್ತು ಮಲಗಿವೆ.

ಅಸಲು ಇದು ನಡೆದದ್ದು..!
ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಈ ಇಡೀ ಪ್ರಕರಣದ ಕುರಿತು ನಂಬಿಕಸ್ಥ ಮೂಲಗಳಿಂದಲೇ ಸೋಮವಾರ ಪಿನ್ ಟೂ ಪಿನ್ ಮಾಹಿತಿ ಬರತ್ತೆ. ಹೀಗಾಗಿ, ತಕ್ಷಣವೇ ಕೇಸ್ ಗೆ ಸಂಬಂಧಿಸಿದಂತೆ ಮುಂಡಗೋಡ RFO ಸಾಹೇಬ್ರಿಗೆ ದೂರವಾಣಿ ಮೂಲಕ ಮಾಹಿತಿ ನೀಡ್ತಿವಿ. ಆದ್ರೆ, ಆ ಹೊತ್ತಲ್ಲಿ ಮಾನ್ಯ RFO ಸಾಹೇಬ್ರು ಕರಡಿ ದಾಳಿಗೆ ಒಳಗಾಗಿದ್ದ ರೈತನನ್ನು ಭೇಟಿ ಮಾಡಲು ಹುಬ್ಬಳ್ಳಿಯ ಕಿಮ್ಸ್ ಗೆ ಹೊರಟಿರ್ತಾರೆ‌. ವಾಪಸ್ ಬರೋದು ಏನಿಲ್ಲವೆಂದರೂ ಸಂಜೆ ಆಗತ್ತೆ ಅಂತಾ ಖುದ್ದು ಅವ್ರೇ ಹೇಳ್ತಾರೆ. ವಾಪಸ್ ಬಂದ ನಂತರ ಆ ಬಗ್ಗೆ ವಿಚಾರಿಸ್ತಿನಿ ಅಂದಿರ್ತಾರೆ. ನಿಜ ಅಂದ್ರೆ ಸದ್ಯ ಮುಂಡಗೋಡಿಗೆ RFO ಆಗಿ ಬಂದಿರೋ ಅಪ್ಪಾರಾವ್ ಕಲಶೆಟ್ಟಿಯವರಲ್ಲಿ ಒಂದಿಷ್ಟು ಗಟ್ಟಿತನದ ಛಾಯೆ ಇದೆ‌. ಸಾರ್ವಜನಿಕರಿಗೆ ತಟ್ಟನೇ ಸ್ಪಂಧಿಸುವ ಗುಣವಿದೆ ಅನ್ನೋದು ಹಲವರ ಮಾತು. ಹೀಗಾಗಿ, ಅಂತವರ ಮೇಲೆ ನಮಗೂ ನಂಬಿಕೆ ಇದೆ. ಅದು ಬೇರೆ ಮಾತು.

ಆದ್ರೆ, ಈ ಎಲ್ಲಾ ಕೇಸ್ ಬಗ್ಗೆ ಒಂದಿಷ್ಟು ಕಾಣದ ಕೈಗಳು ಮುಚ್ಚಿ ಹಾಕೋಕೆ ಏನ್ ಬೇಕೊ ಅದನ್ನೇಲ್ಲ ಮಾಡೋಕೆ ಸಜ್ಜಾಗಿ ನಿಂತಿವೆ ಅನ್ನೋ ಮತ್ತೊಂದು ಬಾತ್ಮಿ ಹರಿದಾಡತ್ತೆ. ಹೀಗಾಗಿ, ಅನಿವಾರ್ಯವಾಗಿ ಶಿರಸಿಯ ಸ್ಕ್ವಾಡ್ ಗೆ ಸಂಪರ್ಕ ಮಾಡಲಾಗತ್ತೆ‌. ಅಸಲು, ಅವರೊಬ್ಬ ಸನ್ಮಾನ್ಯ ಶ್ರೀ ಶ್ರೀ ಶ್ರೀ ಪ್ರಾಮಾಣಿಕ ಬೀಟ್ ಗಾರ್ಡ್ ಅಂತೆ. ಸದ್ಯ ಅವ್ರನ್ನ ಅವ್ರ ಪ್ರಾಮಾಣಿಕ ಸೇವೆಯನ್ನೇ ಗುರುತಿಸಿ ಸ್ಕ್ವಾಡ್ ಟೀಂ ನಲ್ಲಿ ತುರುಕಿಕೊಳ್ಳಲಾಗಿದೆಯಂತೆ. ಹೀಗಾಗಿ, ಆ ಸನ್ಮಾನ್ಯರ ನಂಬರ್ ಸಿಕ್ಕ ಕೂಡಲೇ ಮದ್ಯಾನ 3.43 ಗಂಟೆಯಷ್ಟೊತ್ತಿಗೆ, ಅವ್ರಿಗೆ ಕಾಲ್ ಮಾಡಲಾಗಿರತ್ತೆ. ನಮ್ಮಿಂದ ಫೋನ್ ಕಾಲ ನಲ್ಲಿ ಎಲ್ಲವನ್ನೂ ಕೇಳಿಕೊಂಡ ಆ ಸಾಹೇಬ್ರು, ನಾನು ಈಗಲೇ RFO ಮೇಡಂ ಗೆ ಮಾತಾಡಿ ಅಲ್ಲಿಗೆ ಬರ್ತಿವಿ ಅಂತ ಹೇಳಿ ಕಾಲ್ ಕಟ್ ಮಾಡಿರ್ತಾರೆ. ಅಷ್ಟೆ..! ನಂತ್ರ ಅವ್ರು ನಮ್ಮನ್ನ ಕಾಂಟ್ಯಾಕ್ಟ್ ಮಾಡಿದ್ದು ಸಂಜೆ
6.25 ಕ್ಕೆ..!

ನೆನಪಿರಲಿ, ಕೆಲವೇ ಕ್ಷಣಗಳಲ್ಲಿ..!
ಇದನ್ನ ನಮ್ಮ ದುರಂತ ಅನ್ನಬೇಕೊ, ಅಥವಾ ಉಂಡಮನೆಗೆ ದ್ರೋಹ ಬಗೆಯೋ ನಾಲಾಯಕ ಅಧಿಕಾರಿಗಳ ಬೇಷರ್ಮಿ ಕೆಲಸ ಅನ್ನಬೇಕೊ ನೀವೇ ತೀರ್ಮಾನಿಸಿ.. ಯಾಕಂದ್ರೆ, ಹಾಗೆ ನಾವು ಆ ಸ್ಕ್ವಾಡ್ ನ “ಸನ್ಮಾನ್ಯ” ಅಧಿಕಾರಿಗೆ ಕಾಲ್ ಮಾಡಿದ ಮರುಕ್ಷಣವೇ ಮುಂಡಗೋಡಿನ ಕಟ್ಟಿಗೆ ಅಡ್ಡೆಯ ಜನ ಅಲರ್ಟ್ ಆಗಿರ್ತಾರೆ‌. ತಕ್ಷಣವೇ ಅಲ್ಲಿ ಶೇಖರಿಸಿ ಇಡಲಾಗಿದ್ದ ಕಟ್ಟಿಗೆ ತುಂಡುಗಳನ್ನು ಕ್ರೇನ್ ಮೂಲಕ ಅದೇನೇನೊ ಮಾಡೋಕೆ ಶುರು ಮಾಡಿರ್ತಾರೆ. ಯಾಕಂದ್ರೆ ಆ ಸ್ಕ್ವಾಡ್ ಅಧಿಕಾರಿ, ನಮ್ಮಿಂದ ಕಾಲ್ ಹೋದ ಮರುಗಳಿಗೆಯೇ ಕಟ್ಟಿಗೆ ಅಡ್ಡೆಯ ಮಾಲೀಕನಿಗೆ ಕಾಲ್ ಮಾಡಿ ಮಾಹಿತಿ ನೀಡಿರ್ತಾನೆ. ಅದಕ್ಕಾಗೇ ಪಾಪ ಅಡ್ಡೆಯ ಹುಡುಗ್ರು ಕಟ್ಟಿಗೆಗಳನ್ನು ಹೇಗಾದ್ರೂ ಸರಿ ಬಚ್ಚಿಡುವ ಕೆಲಸಕ್ಕೆ ಇಳಿತಾರೆ. ನಿಮಗೆ ಇನ್ನೋದು ವಿಷಯ ಹೇಳಬೇಕಿದೆ. ಇಲ್ಲಿ ಪಾಪ ಕಟ್ಟಿಗೆ ಅಡ್ಡೆಯವರ ತಪ್ಪೇನೂ ಇಲ್ಲ ಅನಿಸತ್ತೆ. ಅವರದ್ದು ಅದು ಬ್ಯುಸಿನೆಸ್ ಅಷ್ಟೆ. ಯಾರೇ ಕಟ್ಟಿಗೆ ತಂದ್ರೂ ಅದನ್ನ ಅಧಿಕೃತವಾಗಿ ಕಂಡ್ರೆ ಖರೀದಿಸೋದು ಅವ್ರ ಕೆಲಸ ಅಲ್ವಾ..? ಹಿಗಾಗಿ, ಆ ಅಡ್ಡೆಯ ಮಾಲೀಕರೂ ಅದನ್ನ ಖರೀದಿಸಿದ್ದಾರೆ‌. ಅಷ್ಟೆ..

ಸ್ಕ್ವಾಡ್ ಅಂತೆ ಸ್ಕ್ವಾಡು..!
ಈ‌ ಮಾತನ್ನ ಅಕ್ಷರಶಃ ನೋವಿನಿಂದಲೇ ಹೇಳುತ್ತಿದ್ದಿನಿ. ಇಲ್ಲಿ ಅರಣ್ಯ ರಕ್ಷಣೆಗಾಗೇ ನೇಮಿಸಲ್ಪಟ್ಟು, ಅರಣ್ಯ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ರಚಿಸಲಾಗಿರೋ ವಿಶೇಷ ಪಡೆಯಲ್ಲಿರೋರೇ ಬ್ರಷ್ಟರಾಗಿಬಿಟ್ರೆ ಸಾಮಾನ್ಯ ಜನ ಯಾರನ್ನ ನಂಬಬೇಕು..? ಅವ್ರನ್ನ ನಂಬಿ ಅಕ್ರಮಗಳ‌ ಮಾಹಿತಿ ನೀಡಿದಾಗ, ಅಕ್ರಮಿಗಳೊಂದಿಗೆ “ಅಕ್ರಮ ಸಂಬಂಧ” ಇಟ್ಟುಕೊಳ್ಳುವ ಹಡಬಿಟ್ಟಿ ಅಧಿಕಾರಿಗಳಿಗೆ ಏನ್ ಮಾಡಬೇಕು..? ಆ ಸ್ಕ್ವಾಡ್ ಗೆ ಮುಂಡಗೋಡಿನಿಂದ ದೂರವಾಣಿ ಕರೆ ಹೋದಾಗ, ತಕ್ಷಣವೇ ಅವ್ರು ಕಟ್ಟಿಗೆ ಅಡ್ಡೆಯ ಹುಡುಗನಿಗೆ ಕಾಲ್ ಮಾಡಿ ಮಾಹಿತಿ ನೀಡಿದ್ದಾರೆ ಅಂದ್ರೆ ಅವ್ರಿಗೆ ಏನೇನ್ನಬೇಕು..? ಹಾಗಂತ ನಾವು ಹೇಳ್ತಿಲ್ಲ. ಪಾಪ ಆ ಅಮಾಯಕ ಕಟ್ಟಿಗೆ ಅಡ್ಡೆಯ ಮಾಲೀಕನೇ ಪಬ್ಲಿಕ್ ಫಸ್ಟ್ ಎದುರು ಇದ್ದದ್ದನ್ನ ಇದ್ದ ಹಾಗೆ ಹೇಳಿದ್ದಾನೆ. ಅದು ನಮ್ಮಲ್ಲಿ ದಾಖಲಾಗಿದೆ ಕೂಡ.

ಹೀಗಾಗಿ, ಇಲ್ಲಿ ಈ ಸ್ಕ್ವಾಡ್ ಅನ್ನುವ ಅಧಿಕಾರಿಗಳನ್ನು ಹೇಗೆ ನಂಬೋದು..? ಇದೇಲ್ಲ ಹಿರಿಯ ಅಧಿಕಾರಿಗಳಿಗೆ ತಿಳಿಬೇಕಂದ್ರೆ ಆ ಸ್ಕ್ವಾಡ್ ಅಧಿಕಾರಿ ಕಾಲ್ ಡೀಟೇಲ್ಸ್ ತೆಗೆಸಬೇಕು ಅಂದಾಗ ಮಾತ್ರ “ಗೌಡ್ರ” ಗದ್ದಲ “ಸಿದ್ದ”ವಾಗೋದು ಪಕ್ಕಾ. ಅದನ್ನ ಹಿರಿಯ ಅಧಿಕಾರಿಗಳು ಮಾಡ್ತಾರಾ..? ಸಾಧ್ಯವೇ ಇಲ್ಲ ಅನಿಸತ್ತೆ.

ಸದ್ಯ..!
ಕೇಸಿನ ಸಂಪೂರ್ಣ ಮಾಹಿತಿ ಪಡೆದಿರೋ ಮುಂಡಗೋಡ RFO ತಮ್ಮ ಅಧಿಕಾರಿಗಳನ್ನ ಸ್ಥಳಕ್ಕೆ ಕಳಿಸಿ, ಸತ್ಯಾಸತ್ಯತೆ ಅರ್ಥೈಸಿಕೊಂಡಿದ್ದಾರೆ. ಅಲ್ಲಿರೋ ಕಟ್ಟಿಗೆಗಳನ್ನು ತಕ್ಷಣವೇ ವಶಕ್ಕೆ ಪಡೆದು, ಕೇಸು ದಾಖಲಿಸುವುದಾಗಿ ಹೇಳಿದ್ದಾರೆ. ಅಲ್ದೇ ಆ DyRFO ಗೆ ತಕ್ಷಣವೇ ನೋಟೀಸು ಜಾರಿಮಾಡೋದಾಗಿ ಹೇಳಿದ್ದಾರೆ. ಈ‌ ಕ್ಷಣದವರೆಗೂ ಅದ್ಯಾವುದೂ ಘಟಿಸಿಲ್ಲ. ಅದ್ರೆ, ಅದೇಲ್ಲ ಘಟಿಸೋದು ಇವತ್ತಾ..? ಅಥವಾ ನಾಳೆನಾ..? ಅಥವಾ ಇನ್ನೂ RFO ಸಾಹೇಬ್ರಿಗೆ ಸಮಯ, ಮುಹೂರ್ತ ಏನಾದ್ರೂ ಕೂಡಿ ಬರಬೇಕಾ..? ಗೊತ್ತಿಲ್ಲ. ಯಾಕಂದ್ರೆ ಇವತ್ತು ಹುಣ್ಣಿಮೆ ಇದೆ ಅಲ್ವಾ, ಜೊತೆಗೆ ಗ್ರಹಣವೂ ಇದೆ. ಹೀಗಾಗಿ ಗ್ರಹಣ ಮುಗಿದ‌ ಮೇಲೆ ಎಲ್ಲ ಕ್ರಮಗಳೂ ಚಾಲ್ತಿ ಪಡೆದುಕೊಳ್ಳುತ್ತವಾ..? ಗೊತ್ತಿಲ್ಲ. ಆದ್ರೆ, ಇದೇಲ್ಲ “ಮತ್ತದೇ ನಂಬಿಕೆ” ಯನ್ನೇ ನಂಬಿ ಕಾಯುತ್ತಿದ್ದೆವೆ. ಅದೇನೋ “ನಂಬಿ ಕೆಟ್ಟವರಿಲ್ಲವೋ” ಅಂತಾರಲ್ಲಾ ಹಾಗೆ..!