Guarantee News: ರಾಮನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾಗಿ 2 ವರ್ಷ ಸಂದಿದೆ. ಈ ಅವಧಿಯಲ್ಲಿ 7 ಕೋಟಿ 41 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ.

2023ರ ಜೂನ್ 11 ರಿಂದ 2025ರ ಜೂನ್ 11ರವರೆಗೆ ಅಂದರೆ ಎರಡು ವರ್ಷಗಳಲ್ಲಿ 7,41,90,451 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 206 ಕೋಟಿ ರುಪಾಯಿಗಳಾಗಿದೆ. ಯೋಜನೆ ಪ್ರಾರಂಭವಾದ ದಿನದಿಂದಲೂ ಮಹಿಳೆಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಭರ್ಜರಿಯಾಗಿ ಯಶಸ್ಸು ಕಂಡಿದೆ.

ಮೊದಲ ವರ್ಷ ಅಂದರೆ 2023ರ ಜೂನ್ 11 ರಿಂದ 2024ರ ಜುಲೈ 31ರವರೆಗೆ ಅಂದರೆ ಒಂದು ವರ್ಷ 2 ತಿಂಗಳಲ್ಲಿ 4,40,24,935 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 117 ಕೋಟಿ 19 ಲಕ್ಷ ರೂಪಾಯಿಗಳಾಗಿತ್ತು.

ಹೀಗೆ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ವೆಚ್ಚವನ್ನು ನಿಗಮಗಳಿಗೆ ರಾಜ್ಯ ಸರ್ಕಾರ ಭರಿಸುತ್ತಾ ಬಂದಿದ್ದು, ಸಾರಿಗೆ ಸಂಸ್ಥೆಗೆ ಕೋಟ್ಯಂತರ ರುಪಾಯಿ ಆದಾಯವೂ ಬಂದಿದೆ.ಪ್ರತಿನಿತ್ಯ 435 ಮಾರ್ಗದಲ್ಲಿ ಬಸ್ ಗಳ ಸಂಚಾರ:ಸಾರಿಗೆ ಸಂಸ್ಥೆಯ ಬೆಂಗಳೂರು ದಕ್ಷಿಣ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಸೇರಿ ಒಟ್ಟು 6 ಡಿಪೋ (ಘಟಕ)ಗಳಿವೆ.

ಪ್ರತಿ ನಿತ್ಯ 435ಕ್ಕೂ ಹೆಚ್ಚು ಮಾರ್ಗಗಳಲ್ಲಿ 2,090 ಸಾಮಾನ್ಯ, 666 ವೇಗಧೂತ, 155 ನಗರ ಸಾರಿಗೆ ಹಾಗೂ 257 ನಾನ್ ಸ್ಟಾಪ್ ಸೇರಿ ಒಟ್ಟು 3168 ಬಸ್‌ಗಳು ಸಂಚಾರ ಮಾಡುತ್ತಿದ್ದು, ಟ್ರಿಪ್ ಗಳನ್ನೂ ಹೆಚ್ಚಿಸಲಾಗಿದೆ.ಯೋಜನೆ ಆರಂಭಕ್ಕೂ ಹಿಂದೆ ಕಡಿಮೆಯಿದ್ದ ಮಹಿಳಾ ಪ್ರಯಾಣಿಕರ ಸಂಖ್ಯೆ, ಯೋಜನೆ ನಂತರ ಪುರುಷ ಪ್ರಯಾಣಿಕರಿಗಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ರಾಜಧಾನಿ ಬೆಂಗಳೂರು, ಕೆಂಗೇರಿ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿದಂತೆ ಪ್ರತಿನಿತ್ಯ ಕೆಲಸ-ಕಾರ್ಯಗಳಿಗೆ ತೆರಳಲು ರೈಲು, ಖಾಸಗಿ ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳನ್ನು ಅವಲಂಬಿಸುತ್ತಿದ್ದ ಸಾವಿರಾರು ಮಹಿಳೆಯರು ಸಾರಿಗೆ ಬಸ್ ಗಳನ್ನೇ ಅವಲಂಬಿಸಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯ ಕುಸಿದಿದೆ. ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರ್ಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಕೆಎಸ್ ಆರ್ ಟಿಸಿ ಯ ಆರು ಘಟಕಗಳ ಬಸ್‌ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ.

ಗ್ರಾಮೀಣ ಸಾರಿಗೆ ಜತೆಗೆ ಎಕ್ಸ್‌ಪ್ರೆಸ್‌ಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಹೆಚ್ಚಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಈ ಮೊದಲು ಪ್ರಯಾಣಿಕರು ಇಲ್ಲದೆ ಖಾಲಿ ಸಂಚರಿಸುತ್ತಿದ್ದ ಬಸ್‌ಗಳಲ್ಲೂ ಈಗ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.

ಚನ್ನಪಟ್ಟಣ ಡಿಪೋದಲ್ಲಿ ಅಧಿಕ ಪ್ರಯಾಣ:ಜಿಲ್ಲೆಯಲ್ಲಿರುವ ಕೆಎಸ್ಆರ್‌ಟಿಸಿಯ ಆರು ಡಿಪೊಗಳಲ್ಲಿ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚನ್ನಪಟ್ಟಣ ಡಿಪೊ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.82 ಕೋಟಿ ಮಹಿಳೆಯರು ಪ್ರಯಾಣಿಸಿದರೆ, ಹಾರೋಹಳ್ಳಿ ಡಿಪೋ ವ್ಯಾಪ್ತಿಯಲ್ಲಿ ಅತಿ ಕಡಿಮೆ 95.17 ಲಕ್ಷ ಮಹಿಳಾ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ.

2023ರ ಜೂನ್ ರಿಂದ 2024ರ ಮಾರ್ಚ್ ಅಂತ್ಯದವರೆಗೆ 3 ಕೋಟಿ 86 ಲಕ್ಷ ಮಹಿಳಾ ಪ್ರಯಾಣಿಕರು ವಿವಿಧ ಡಿಪೋಗಳ ಬಸ್ ಗಳಲ್ಲಿ ಸಂಚಾರ ಮಾಡಿದ್ದು, ಇದರ ಟಿಕೆಟ್ ನ ಒಟ್ಟು ಮೊತ್ತ 80.26 ಕೋಟಿ ಕೋಟಿ ರುಪಾಯಿ ಆಗಿತ್ತು. 2024ರ ಏಪ್ರಿಲ್ ನಿಂದ 2025ರ ಏಪ್ರಿಲ್ ತಿಂಗಳ ಅಂತ್ಯಕ್ಕೆ ಪ್ರಯಾಣಿಕರ ಸಂಖ್ಯೆ 4 ಕೋಟಿ 33 ಲಕ್ಷ ದಾಟಿದ್ದು, ಇದರ ಟಿಕೆಟ್ ಮೌಲ್ಯ 125.74 ಕೋಟಿ ರುಪಾಯಿಗಳಾಗಿದೆ….ಕೋಟ್ …ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಸಾಮಾಜಿಕ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ.

ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರ ವೆಚ್ಚದಿಂದ ಮುಕ್ತರಾಗಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದೇ ತಮ್ಮ ತಿಂಗಳ ಆದಾಯದ ಶೇ 10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು. ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ.

– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು

ಮಹಿಳೆ ಯರ ಸಬಲೀಕರಣಕ್ಕಾಗಿ ಜಾರಿಗೆ ತರಲಾದ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಯಶಸ್ಸು ಕಂಡಿದೆ. ಈ ಯೋಜನೆಯು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದರ ಜೊತೆಗೆ ಉದ್ಯೋಗಗಳ ಸೃಷ್ಟಿಯಾಗಿದೆ. ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದೆ.- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬೆಂಗಳೂರು ದಕ್ಷಿಣ.

ಮಹಿಳೆಯರ ಉಚಿತ ಪ್ರಯಾಣದ ವಿವರ (2023ರ ಜೂ.11ರಿಂದ 2025ರ ಏ.30ರವರೆಗೆ)

ಡಿಪೋ ಮಹಿಳಾ ಪ್ರಯಾಣಿಕರ ಸಂಖ್ಯೆ ಮೊತ್ತ (ರೂ.ಗಳಲ್ಲಿ)

ಕನಕಪುರ 1,72,37,553 51,64,31,770

ಚನ್ನಪಟ್ಟಣ 1,82,57,126 46,90,61,947

ಹಾರೋಹಳ್ಳಿ 95,17,482 31,37,98,398

ರಾಮನಗರ 1,80,05,366 40,69,94,508

ಮಾಗಡಿ 1,11,72,924 35,37,75,369

ಒಟ್ಟು 7,41,90,451 206,00,61,992

 

error: Content is protected !!