ಬಿರು ಬೇಸಿಗೆಯಲ್ಲಿ ನೀರಿಗಾಗಿ ಕಾಡು ಪ್ರಾಣಿಗಳ ಪರದಾಟ, ಕೃತಕ ತೊಟ್ಟಿಗಳಲ್ಲಿ  ನೀರು ಉಣಿಸ್ತಿದೆ ಮುಂಡಗೋಡ ಅರಣ್ಯ ಇಲಾಖೆ..!

ಅಸಲು ಬೇಸಿಗೆ ಇನ್ನೂ ಭರ್ತಿಯಾಗಿ ಶುರುವಾಗೇ ಇಲ್ಲ, ಆದ್ರೂ ಕೂಡ ಬಿಸಿಲಿನ ತಾಪ‌ ಅನ್ನೋದು ಜೀವ ಸಂಕುಲವನ್ನೇಲ್ಲ‌ ಬೆವರಾಗಿಸಿ ಬೇಯುವಂತೆ ಮಾಡಿದೆ. ಮುಂಡಗೋಡ ತಾಲೂಕಿನ ಅದೇಷ್ಟೋ ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿಗೆ “ಬರ” ಬಂದೊದಗಿದೆ. ಎಪ್ರಿಲ್ ತಿಂಗಳು ಬಂದ್ರೆ ಇನ್ನೂ ಏನೇನ್ ಕತೆಯಿದೆಯೊ ಗೊತ್ತಿಲ್ಲ, ಪ್ರಸಕ್ತ ವರ್ಷದ ಬೇಸಿಗೆ ಬಹುತೇಕ ಜೀವಜಗತ್ತಿಗೆ ಬವಣೆ ತಂದಿಡುವ ಸಾಧ್ಯತೆಯಿದೆ. ಅದ್ರಲ್ಲೂ, ಕಾಡುಪ್ರಾಣಿ, ಪಕ್ಷಿಗಳ ಗೋಳು ದೇವರಿಗೇ ಪ್ರೀತಿ..!

ಭೀಕರ ಬೇಸಿಗೆ, ಜೀವಜಲಕ್ಕಾಗಿ ಪ್ರಾಣಿಗಳ ಪರದಾಟ..!
ಸದ್ಯ ನಾಡಿನಲ್ಲಿ ಭೀಕರ ಬೇಸಿಗೆಯಿದೆ. ಪ್ರತೀ ವರ್ಷದ ಬೇಸಿಗೆಯಲ್ಲೂ ಕಾಡು ಪ್ರಾಣಿಗಳು ಜೀವಜಲಕ್ಕಾಗಿ ಪರಿತಪಿಸ್ತವೆ. ಹಾಗೆ ನೋಡಿದ್ರೆ, ಮುಂಡಗೋಡ ತಾಲೂಕಿನ ಬಹುತೇಕ‌ ಕಾಡು ಸದ್ಯ ಒಣ ಒಣ ಒಣಗಿದೆ. ಇಲ್ಲಿ ಕಾಡಿನ ಮದ್ಯೆ ಹಲವು ಕೆರೆಗಳಿವೆ.‌ ಆದ್ರೆ ಅಂತಹ ಕೆರೆಗಳು ಅದ್ಯಾವ ಕಾರಣಕ್ಕೋ ಗೊತ್ತಿಲ್ಲ‌. ಮಳೆಗಾಲ ಮುಗಿದ ಕೆಲವೇ ದಿನಗಳಲ್ಲಿ ಬತ್ತಿ ಹೋಗ್ತಿವೆ. ಹೀಗಾಗಿ, ಕಾಡಿನ ಪ್ರಾಣಿಗಳಿಗೆ ಕುಡಿಯಲು ನೀರು ಅನ್ನೋದು ಸಿಗೋದೇ ಕಷ್ಟಕಷ್ಟವಾಗ್ತಿದೆ. ಈ ಕಾರಣಕ್ಕಾಗಿ ಅದೇಷ್ಟೋ ಪ್ರಾಣಿಗಳು ಜೀವಜಲಕ್ಕೆ ಹಂಬಲಿಸಿ ಜೀವ ಬಿಡೋದೂ ಕೂಡ ಸಹಜವಾಗ್ತಿದೆ.

ಅರಣ್ಯ ಇಲಾಖೆಯ ಮಹತ್ಕಾರ್ಯ..!
ಅಸಲಿಗೆ, ಇಂತಹ ಭಯಾನಕ ಬೇಸಿಗೆಯ ರಣಬಿಸಿಲಿನ ಹೊಡೆತಕ್ಕೆ ಕಾಡು ಪ್ರಾಣಿಗಳು ವಿಲ ವಿಲ ಒದ್ದಾಡ್ತಿವೆ. ಹೀಗಾಗಿ, ಅರಣ್ಯ ಇಲಾಖೆ ಮಹತ್ಕಾರ್ಯ ಹಮ್ಮಿಕೊಂಡಿದೆ. ತಾಲೂಕಿನ ಕಾಡುಗಳಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಕಾಡು ಪ್ರಾಣಿ, ಪಕ್ಷಿಗಳ ದಾಹ ನೀಗಿಸ್ತಿದೆ. ತಾಲೂಕಿನ ಪ್ರತೀ ಅರಣ್ಯ ಬೀಟ್ ಗಳಲ್ಲೂ ನೀರಿನ ಕೃತಕ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿಡಲಾಗ್ತಿದೆ. ಹೀಗಾಗಿ, ಕಾಡುಪ್ರಾಣಿಗಳು ನೀರು ಕುಡಿದು ದಾಹ ತೀರಿಸಿಕೊಳ್ತಿವೆ.

ದಯವಿರಲಿ ಪ್ರಾಣಿ ಪ್ರಕ್ಷಿಗಳಲಿ..!
ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ಅಪಾಯದಲ್ಲಿರ್ತವೆ. ಕುಡಿಯಲು ಗುಟುಕು ನೀರಿಗಾಗಿ ಪರದಾಡುತ್ತವೆ. ಹೀಗಾಗಿ, ಪ್ರಾಣಿ ಪಕ್ಷಿಗಳ ಮೇಲೆ ಕರುಣೆ ಬೇಕಿದೆ. ಮನೆಯ ಚಾವಣಿಯ ಮೇಲೆ, ಹಿತ್ತಲಿನಲ್ಲಿ, ಮನೆಯ ಮುಂದೆ ಹೀಗೆ ಎಲ್ಲಿ ಸಾಧ್ಯವಾಗತ್ತೋ ಅಲ್ಲಿ ಪುಟ್ಟ ಪುಟ್ಟ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಇಡಬೇಕಿದೆ. ಅಂದಾಗ ಮಾತ್ರ ಪುಟ್ಟ ಜೀವಗಳು ಒಂದಿಷ್ಟು ನೆಮ್ಮದಿಯಾಗಿ ಬದುಕಬಹುದು. ಅಲ್ಲವಾ..?