ಅಳಿಯನ ಕೊಂದ ಮಾವನಿಗೆ ಜೀವಾವಧಿ ಶಿಕ್ಷೆ, ಕೋರ್ಟ್ ತೀರ್ಪು ಪ್ರಕಟ..!

ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ 2024 ರಲ್ಲಿ ನಡೆದಿದ್ದ ಅಳಿಯನ ಹತ್ಯೆ ಪ್ರಕರಣದಲ್ಲಿ, ಅಳಿಯನ ಕೊಂದ ಮಾವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

ಅಂದಹಾಗೆ, ಶಿರಸಿ ತಾಲೂಕಿನ ಮಳಲಿ ನಿವಾಸಿಯಾದ ವೆಂಕಟ್ರಮಣ ಗಣಪಾ ಗೌಡ ತನ್ನ ಮನೆ ಅಳಿಯನಾದ ಮಂಜುನಾಥ ರಾಮಾ ಗೌಡ (40), ಕೂಲಿ ಕಾರ್ಮಿಕನನ್ನು ವೈಮನಸ್ಯದಿಂದ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ.

ಸರಾಯಿ ಕುಡಿಯಲು ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ಅಳಿಯನೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪಿ, 02/05/2024 ರಂದು ಮಧ್ಯಾಹ್ನ 1.10 ರಿಂದ 1.30 ಗಂಟೆಯ ನಡುವೆ ಮನೆಯವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯದಲ್ಲಿ, ಯಾರು ಇಲ್ಲದ ವೇಳೆ ಕಟ್ಟಿಗೆಯ ಬಡಿಗೆಯಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಎಸಗಿದ್ದನು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತ ದಂಡ ಸಂಹಿತೆ ಕಲಂ 302 ಅಡಿಯಲ್ಲಿ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಲಭ್ಯವಿದ್ದ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಆಧರಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಹೆಡ್ ಕಾನ್ಸಟೇಬಲ್ ಮಹೇಶ ನಾಯ್ಕ ಹಾಗೂ ಕಾನ್ಸಟೇಬಲ್ ಶಂಕರಾಚಾರಿ ಎನ್ ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸುವಲ್ಲಿ ಸಹಕರಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ಪೀಠಾಸೀನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೆಂಕಟ್ರಮಣ ಗಣಪಾ ಗೌಡನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿದರು.

ಅಲ್ಲದೇ, ಮೃತನ ಪತ್ನಿಗೆ ರೂ.50,000 ಪರಿಹಾರ ನೀಡಲು ಹಾಗೂ ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ. ಈ ಕುರಿತು ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕಟಣೆ ನೀಡಿದ್ದಾರೆ.

*ಪ್ರಮುಖ ಸುದ್ದಿ ಮುಂಡಗೋಡಿನ ನಕಲಿ “ಮೂಲವ್ಯಾಧಿ” ಡಾಕ್ಟರ್ ನ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ, ಕ್ಲಿನಿಕ್ ಕ್ಲೋಸ್..! ತಾಲೂಕಿನ ಇನ್ನುಳಿದ “ಫೇಕು” ಡಾಕ್ಟರುಗಳ ಮೇಲೆ ದಾಳಿ ಯಾಕಿಲ್ಲ..?*