ಶಿರಸಿಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಿರಸಿ: ಪರೀಕ್ಷೆಯ ಸಮಯದಲ್ಲಿ ಮೊಬೈಲ್ ವ್ಯಾಮೋಹ ಬಿಟ್ಟು ಓದಿನ ಕಡೆ ಗಮನಹರಿಸುವಂತೆ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಿರಸಿ ನಗರದ ಗಣೇಶನಗರದ 15 ವರ್ಷದ ಶುಭಂ ನಾಯ್ಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಹೇಳಲಾಗಿದೆ. ವಾರ್ಷಿಕ ಪರೀಕ್ಷೆ ಸನಿಹ ಬಂದರೂ ಬಾಲಕ ಓದಿನತ್ತ ಗಮನಹರಿಸದೆ, ಅತಿಯಾಗಿ ಮೊಬೈಲ್ ಮತ್ತು ಟಿವಿ ನೋಡುತ್ತಿದ್ದ ಎನ್ನಲಾಗಿದೆ.

ಗುರುವಾರ ಈತ ಓದುವುದನ್ನು ಬಿಟ್ಟು ಮೊಬೈಲ್ ನೋಡುತ್ತಿರುವುದನ್ನು ಗಮನಿಸಿದ ತಾಯಿ, ಮಗನ ಹಿತದೃಷ್ಟಿಯಿಂದ ಬುದ್ಧಿವಾದ ಹೇಳಿದ್ದರು.

ಈ ವೇಳೆ ತಾಯಿ-ಮಗನ ನಡುವೆ ವಾಗ್ವಾದ ನಡೆದಿದ್ದು, ಆತನಿಗೆ ಮೊಬೈಲ್‌ ನೋಡದಂತೆ ನಿರ್ಬಂಧ ಹೇರಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಮಗನ ಅಕಾಲಿಕ ಮರಣದಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.