ಇಂದೂರಿನಲ್ಲಿ ಘೋರ ಕೃತ್ಯ, ಆಕಳ ಕರುವಿನ ಕರುಳನ್ನೇ ಕತ್ತರಿಸಿ ಹೋದ ದುಷ್ಕರ್ಮಿಗಳು..!

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಪುಟ್ಟ ಆಕಳ ಕರುವೊಂದನ್ನು ದುಷ್ಕರ್ಮಿಗಳು ಭಯಾನಕವಾಗಿ ಕೊಚ್ಚಿ ಹಾಕಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಅಥವಾ ಕಾಡುಪ್ರಾಣಿಗಳ ದಾಳಿ ಮಾಡಿದ್ವಾ..? ಒಟ್ನಲ್ಲಿ ಪುಟ್ಟ ಆಕಳ ಕರುವಿನ ಹೊಟ್ಟೆಯ ಕರುಳುಗಳು ಹೊರ ಬಂದಿವೆ. ಕರು ಜೀವನ್ಮರಣದ ನಡುವೆ ಒದ್ದಾಡುತ್ತಿದೆ.

ಅಂದಹಾಗೆ, ಇಂದೂರು ಗ್ರಾಮದ ದೇವಮ್ಮ ಯಲ್ಲಪ್ಪ ಬೂಚಳ್ಳಿ ಎಂಬುವವರ ಗದ್ದೆಯ ಮನೆಯಲ್ಲಿ ಕೃತ್ಯ ನಡೆದಿದೆ. ಎಂದಿನಂತೆ, ಇಂದು ಮುಂಜಾನೆ ಮನೆಯಲ್ಲಿ ಆಕಳು ಮತ್ತು ಕರುವನ್ನು ಕಟ್ಟಿ ಕೆಲಸಕ್ಕೆ ಹೋದಾಗ ಕೃತ್ಯ ನಡೆದಿದೆ. ಹಾಗಂತ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದು ಮೊದಲಲ್ಲ..!
ಅಸಲು, ಈ ಕುಟುಂಬದ ಮೇಲೆ,  ಈ ಕುಟುಂಬದ ಮೂಕ ಪ್ರಾಣಿಗಳ ಮೇಲೆ ಅದ್ಯಾವ ಕ್ರೂರ ಮನುಷ್ಯರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಹೀಗೆ ಆಕಳ ಕರುವನ್ನು ಕೊಂದು ಹಾಕಿದ್ದು ಇದು ಮೂರನೇ ಬಾರಿಯಂತೆ. ಎರಡು ತಿಂಗಳ ಹಿಂದೆ ಇದೇ ರೀತಿ ಒಂದು ಆಕಳ ಕರು ಸತ್ತಿದೆ. ಮತ್ತೆ 4 ತಿಂಗಳ ಹಿಂದೆ ಒಂದು ಆಕಳ ಕರು ಇದೇ ರೀತಿಯಾಗಿ ಬಲಿಯಾಗಿದೆ. ಹಾಗಂತ ಕುಟುಂಬ ನೊಂದು ನುಡಿಯುತ್ತಿದೆ.

ಅದೇನೇ ದ್ವೇಷವಿರಲಿ, ಅದೇನೇ ವ್ಯಾಜ್ಯಗಳಿರಲಿ, ಹೀಗೆ ಮೂಕ ಪ್ರಾಣಿಗಳ ಮೇಲೆ ದುಷ್ಕರ್ಮಿಗಳು, ಕರುಣೆ ಇಲ್ಲದೆ ದೇಹದ ಭಾಗವನ್ನು ಕಡಿದು ಹಾಕಿದ್ದು ರಾಕ್ಷಸೀತನವಲ್ಲವೇ..? ಪೊಲೀಸ್ರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಕೃತ್ಯ ನಡೆಸಿರೋ ರಾಕ್ಷಸರ ಹೆಡೆಮುರಿ ಕಟ್ಟಬೇಕಿದೆ. ತಕ್ಕ ಶಿಕ್ಷೆ ಕೊಡಿಸಬೇಕಿದೆ. ಒಂದು ವೇಳೆ ಕಾಡು ಪ್ರಾಣಿಗಳ ದಾಳಿ ಅಂತಾದ್ರೆ, ಈ ಬಗ್ಗೆ ಅರಣ್ಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ.

ಒಟ್ನಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ‌.