Crime News: ಬೆಳಗಾವಿ: ಕೆಲಸ ಮುಗಿಸಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ನಡುರಸ್ತೆಯಲ್ಲಿ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ನಡೆದಿದೆ.
ವಡ್ಡರವಾಡಿಯ ರಾಮನಗರದ ನಿವಾಸಿ ಮಹಾದೇವಿ ಕರೆನ್ನವರ್ (45) ಕೊಲೆಯಾದ ದುರ್ದೈವಿ. ಮೆಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ರಾತ್ರಿ ಎಂದಿನಂತೆ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಆಗಂತುಕ ವ್ಯಕ್ತಿ ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಗಂಭೀರ ಗಾಯಗೊಂಡ ಮಹಾದೇವಿ ಅವರು ಪ್ರಜ್ಞಾಹೀನರಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಅಲ್ಲಿಯೇ ಉಸಿರು ಚೆಲ್ಲಿದ್ದಾರೆ. ಅದೇ ಮಾರ್ಗವಾಗಿ ಹೋಗುತ್ತಿದ್ದ ದಾರಿಹೋಕರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ್ ಭರಮನಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಫ್‌ಎಸ್ಎಲ್ ಮತ್ತು ಶ್ವಾನದಳ ಸಿಬ್ಬಂದಿ ಕೂಡ ಪರಿಶೀಲಿಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದಿಲ್ಲವಾದರೂ, ಹಣಕಾಸಿನ ವ್ಯವಹಾರದ ಬಗ್ಗೆ ಶಂಕೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಒಬ್ಬನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.