ಕಾರವಾರ: ಜಿಲ್ಲೆಯ ಗುಡ್ಡಗಾಡು ಪ್ರದೇಶಗಳು ಮತ್ತು ಪ.ಜಾತಿ ಮತ್ತು ಪಂಗಡದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ನಿರ್ದೇಶನ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತೀ ತಿಂಗಳು ಪಡಿತರ ಪಡೆಯಲು ತಮ್ಮ ವಾಸಸ್ಥಳದಿಂದ ಅತ್ಯಂತ ದೂರ ಕ್ರಮಿಸಬೇಕಾದ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ನಿಗಧಿತ ಮಾರ್ಗಸೂಚಿಯನ್ವಯ ಸಮೀಪದ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತರೆಯುವ ಕುರಿತಂತೆ ಪರಿಶೀಲನೆ ನಡೆಸಬೇಕು, ಈಗಾಗಲೇ ಹೊಸ ನ್ಯಾಯಬೆಲೆ ಅಂಗಡಿ ತರೆಯಲು ಮನವಿ ಸಲ್ಲಿಸಿರುವ ಸಾರ್ವಜನಿಕರ ಮನವಿಗಳನ್ನು ಕೂಡಾ ಪರಿಗಣಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಈಗಾಗಲೇ ನಿಗಧಿತ ಸಂಖ್ಯೆಗಿಂತ ಹೆಚ್ಚಿನ ಪಡಿತರ ಚೀಟಿಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಪಡಿತರ ಪಡೆಯಲು ದೂರ ಪ್ರದೇಶದ ಸಮಸ್ಯೆಯಿದ್ದಲ್ಲಿ , ಹೆಚ್ಚುವರಿ ಪಡಿತರ ಚೀಟಿಗಳಿಗೆ ಹೊಸ ಅಂಗಡಿ ತೆರೆಯಬೇಕು, ಹೊಸ ಪಡಿತರ ಅಂಗಡಿಗೆ ಪ್ರಸ್ಥಾವನೆ ಸಲ್ಲಿಸುವ ಮುನ್ನ ಸಂಬಂದಪಟ್ಟ ತಾಲೂಕುಗಳ ತಹಸೀಲ್ದಾರ್ಗಳ ವರದಿಯನ್ನು ಪಡೆಯಬೇಕು ಎಂದರು.
ಸಾರ್ವಜನಿಕರು ತಮ್ಮ ಗ್ರಾಮಗಳಿಗೆ ಹೊಸ ಪಡಿತರ ಅಂಗಡಿಗಳ ಅಗತ್ಯವಿದ್ದಲ್ಲಿ ತಮ್ಮ ತಾಲೂಕಿನ ಆಹಾರ ನಿರೀಕ್ಷಕರಿಗೆ ಅಥವಾ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಮನವಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ವರ್ಚುವಲ್ ಮೂಲಕ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
