ಎಸ್.ಎಸ್.ಎಲ್.ಸಿ ಪರೀಕ್ಷೆ: ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ,ಪರೀಕ್ಷೆಗೆ ಪ್ರೇರಣೆ ನೀಡಿದ ಜಿ.ಪಂ. ಸಿ.ಇ.ಓ. ಡಾ.ದಿಲೀಷ್ ಶಶಿ

ಕಾರವಾರ; ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಅವರು ಜಿಲ್ಲೆಯ 199 ಪ್ರೌಡಶಾಲೆಗಳ ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುವ ಕುರಿತು ಶನಿವಾರ ಸಂವಾದ ನಡೆಸಿದರು.

ನಾನು ಕೇರಳದ ಒಂದು ಹಳ್ಳಿಯಿಂದ ಬಂದಿದ್ದು, ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದೇನೆ ಎಂದ ಅವರು, ತಮ್ಮ ಶಾಲಾ ಜೀವನದ ಅನುಭವಗಳು, ವೈದ್ಯಕೀಯ ಶಿಕ್ಷಣವನ್ನು ಪಡೆದ ಬಗ್ಗೆ, ನಂತರದಲ್ಲಿ ಅದೇ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿ ವೃತ್ತಿಯನ್ನು ಪ್ರಾರಂಭಿಸಿದ್ದು, 2017ರ ಬ್ಯಾಚ್‌ನಲ್ಲಿ ಭಾರತೀಯ ಆಡಳಿತ ಸೇವೆಗೆ (ಐ.ಎ.ಎಸ್) ಕರ್ನಾಟಕ ಕೆಡರ್‌ನಲ್ಲಿ ಆಯ್ಕೆ ಆಗಿದ್ದು, ಕಾರವಾರ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಜಿಲ್ಲಾ ಪಂಚಾಯತ ಕಾರವಾರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮಕ್ಕಳಿಗೆ ತಮ್ಮನ್ನು ತಾವು ಪರಿಚಯಿಸಿಕೊಂಡರು.

ವಿದ್ಯಾರ್ಥಿ ಜೀವನ ಅತ್ಯಂತ ಅತ್ಯಮೂಲ್ಯವಾದುದು, ಎಸ್.ಎಸ್.ಎಲ್.ಸಿ ಶಿಕ್ಷಣವು ಮುಂದಿನ ಜೀವನದ ಹಾಗೂ ಬೌದ್ಧಿಕ ಬೆಳವಣಿಗೆಯ ಪ್ರಾರಂಭದ ಹಂತ, ಪ್ರೌಢಶಾಲೆಯ ಅನುಭವಗಳು ಜೀವನದ ಪ್ರತಿ ಹಂತದಲ್ಲಿಯೂ ನೆನಪಿನಲ್ಲಿರುವ ಅಂಶಗಳು. ಕಠಿಣ ಹಾಗೂ ಸತತ ಪರಿಶ್ರಮ, ಒತ್ತಡವನ್ನು ಸರಿದೂಗಿಸಿಕೊಂಡು ಹೋಗುವ ರೀತಿ, ಯೋಜನಾಬದ್ಧವಾಗಿ ಅಧ್ಯಯನ ನಡೆಸುವುದು ಹಾಗೂ ಅದನ್ನು ಕಾರ್ಯರೂಪಕ್ಕೆ ತರುವುದು ಹಾಗೂ ಯಾವುದೇ ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಎಲ್ಲಾ ವಿದ್ಯಾರ್ಥಿಗಳೂ, ತಮ್ಮ ಪಾಲಕರು ಹೆಮ್ಮೆ ಪಡುವ ರೀತಿಯಲ್ಲಿ, ಕಲಿಸಿದ ಶಿಕ್ಷಕರಿಗೆ ಗೌರವ ಬರುವ ರೀತಿಯಲ್ಲಿ ಹಾಗೂ ಜಿಲ್ಲೆಯ ಉತ್ತಮ ಸಾಧನೆಗೆ ಅಳಿಲು ಸೇವೆ ನೀಡುವ ನಿಟ್ಟಿನಲ್ಲಿ ಪರೀಕ್ಷೆ ಬರೆಯಿರಿ ಎಂದ ಅವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ನಂತರದಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಗುಮೊಗದಲ್ಲಿ ಉತ್ತರಿಸುತ್ತಾ ಉತ್ತಮ ಆರೋಗ್ಯ, ವೇಳೆಗೆ ಸರಿಯಾಗಿ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ, ಪೂರ್ಣ ಪ್ರಮಾಣದ ನಿದ್ದೆ, ಯೋಜಿತ ಯೋಜನೆ ಮತ್ತು ಅದರ ಅನುಷ್ಠಾನ ಹಾಗೂ ತಮ್ಮ ಮೇಲೆ ತಮಗೆ ನಂಬಿಕೆ ಇದು ಉತ್ತಮ ಸಾಧನೆಯ ಒಳಗುಟ್ಟು ಎನ್ನುವುದನ್ನು ತಿಳಿಸಿದರು.

ವಿದ್ಯಾರ್ಥಿಗಳು ಕೇಳುವ ಎಲ್ಲಾ ರೀತಿಯ ಪ್ರಶ್ನೆಗಳಿಗೂ ತಾಳ್ಮೆಯಿಂದ ಆಪ್ತಸಮಾಲೋಚನೆ ಮಾಡುವ ರೀತಿಯಲ್ಲಿ ಉತ್ತರಿಸಿದರು. ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿ ಕೃಷ್ಣ “ಸರ್ ತಮ್ಮ ಮಾತುಗಳು ನನಗೆ ಸ್ಫೂರ್ತಿ ತಂದಿದೆ. ತಾನು ಐ.ಎ.ಎಸ್ ಅಧಿಕಾರಿ ಆಗಬೇಕಾದರೆ ಯಾವ ರೀತಿ ತಯಾರಿ ಮಾಡಬೇಕು” ಎನ್ನುವುದಾಗಿ ಪ್ರಶ್ನಿಸಿದಾಗ ಈಗಿನಿಂದಲೇ ಕ್ರಮಬದ್ಧವಾದ ಓದು, ಗುರಿಯೆಡೆಗೆ ಏಕಾಗ್ರತೆ, ವೇಳೆಯ ಹೊಂದಾಣಿಕೆ ಹಾಗೂ ಸಾಧನೆ ಮಾಡುವೆನು ಎನ್ನುವ ಛಲ ಇದ್ದರೆ ಯಾವ ಸಾಧನೆಯನ್ನಾದರೂ ಸಾಧಿಸಬಹುದು ಎಂದು ಸ್ಪಷ್ಟಪಡಿಸಿದರು. ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಉತ್ತರವಾಗಿ ಹಾಗೂ ಸಾಧನೆಗೆ ಪೂರಕವಾಗಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ತಮ್ಮ ಶಾಲೆಗೆ ಭೇಟಿ ನೀಡುವವರಿದ್ದು, ಅವರೊಂದಿಗೆ ಹೆಚ್ಚಿನ ಸಂವಾದ ನಡೆಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಲತಾ ನಾಯಕ ಸ್ವಾಗತಿಸಿದರು ಹಾಗೂ ಜಿಲ್ಲಾ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಯಾದ ಶಿಕ್ಷಣಾಧಿಕಾರಿ ಡಾ. ಶುಭಾ ನಾಯಕ ವಂದಿಸಿದರು. ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಪಂಚಾಯತ ಸಿಬ್ಬಂದಿ ಭಾಸ್ಕರ ಗಾಂವಕರ, ಕಲ್ಪನಾ ನಾಯಕ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.