ಶಿರಸಿ ಮಾರಿಕಾಂಬೆ ಜಾತ್ರೆ ; ಬಸ್ ಗಳ ಮಾರ್ಗ ಬದಲಾವಣೆ..!

ಕಾರವಾರ: ಶಿರಸಿ ನಗರದಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 4 ರ ವರೆಗೆ ಶ್ರೀ ಮಾರಿಕಾಂಬಾ ಜಾತ್ರೆ ಜರುಗಲಿರುವುದರಿಂದ ಜನರ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ/ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಶಿರಸಿ ಶಹರದ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ 77 ಮತ್ತು ರಾಷ್ಟ್ರೀಯ ಹೆದ್ದಾರಿ 766(ಇ) ಯಲ್ಲಿ ಈ ಕೆಳಗಿನಂತೆ ವಾಹನಗಳ ಸಂಚಾರ ನಿಷೇಧಿಸಿ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಆದೇಶಿದ್ದಾರೆ.
ಮಾರ್ಚ್ 4 ರ ಮಧ್ಯ ರಾತ್ರಿ 12 ಗಂಟೆ ರವರೆಗೆ ಶಿರಸಿ ಶಹರದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಐದು ರಸ್ತೆ ವೃತ್ತದಿಂದ- ವಾಜಿ ಚೌಕ್, ಬಿಡ್ಡಿ ವೃತ್ತ, ಕಾಮತ ಹೋಟೆಲ್ ಕ್ರಾಸ್, ಮಂಗಳೂರ ಹೊಟೆಲ್ ಕ್ರಾಸ್‌ದಿಂದ ಕೋಟೆಕೇರೆ ವೃತ್ತದ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ.

ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ, ಶಿರಸಿ ಶಹರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ , ಐದು ರಸ್ತೆ ಯಿಂದ ಝೂ ವೃತ್ತ -ರಾಘವೇಂದ್ರ ಅಶ್ವಿನಿ ವೃತ್ತ, ಮಹಾಸತಿ ವೃತ್ತದಿಂದ ಯಲ್ಲಾಪುರ ಕಡೆಯಿಂದ, ಹುಬ್ಬಳ್ಳಿ ಕಡೆಗೆ ಹೋಗುವಂತೆ ಹಾಗೂ ಬನವಾಸಿ ಕಡೆಗೆ ಹೋಗುವ ವಾಹನಗಳಿಗೆ ಮಹಾಸತಿ ವೃತ್ತದಿಂದ ಎ.ಪಿ.ಎಂ.ಸಿ. ಮಾರ್ಗವಾಗಿ ಕೋಟೆಕೇರೆ ವೃತ್ತದಿಂದ ಸಿರ್ಸಿಕರ ಪ್ಲಾಟ್ ಮಾರ್ಗವಾಗಿ ಬನವಾಸಿ ರಸ್ತೆ ಮುಖಾಂತರ ಸಂಚರಿಸುವುದು.

ಶಿರಸಿ ಶಹರದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ 77 ರಲ್ಲಿ ರಾಮನಬೈಲ್ ಕ್ರಾಸ್‌ದಿಂದ ಮಾರಿಕಾಂಬಾ ದೇವಸ್ಥಾನ ಮಾರ್ಗವಾಗಿ ಕಾಮತ ಹೊಟೆಲ್ ಕ್ರಾಸ್ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ.

ಬನವಾಸಿ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ, ಶಿರಸಿ ಶಹರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 77 ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಸಿರ್ಸಿಕರ ಪ್ಲಾಟ್-ಕರಿಗುಂಡಿ ರಸ್ತೆ, ಕೋಟೆಕೇರೆ ಎ.ಪಿ.ಎಂ.ಸಿ. ವೇ ಬ್ರಿಜ್ ದಿಂದ ಹುಬ್ಬಳ್ಳಿ ಹಾವೇರಿ, ಮತ್ತು ಎ.ಪಿ.ಎಂ.ಸಿ. ಮಾರ್ಗವಾಗಿ ಯಲ್ಲಾಪುರ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವುದು.

ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಲೇಕಾ ಗೇಟ್ ಕ್ರಾಸ್ ದಿಂದ ಪ್ರವೇಶಿಸಿ ರಾಯರಪೇಟೆ ಮಾರ್ಗವಾಗಿ ಅರ್ಬನ್ ಬ್ಯಾಂಕ್ ಕ್ರಾಸ್ ದಿಂದ ವೀರಭದ್ರಗಲ್ಲಿ ಕರ್ಜಗಿ ಕಲ್ಯಾಣ ಮಂಟಪ ಮಾರ್ಗವಾಗಿ ಶಂಕರ ಹೊಂಡಾ ಮಾರ್ಗವಾಗಿ ವಿಜಯನಗರ ಮಿಸ್ತಾರ ಪ್ಲಾಟ್ ಪಾರ್ಕಿಂಗ್ ಸ್ಥಳದವರೆಗೆ ರಸ್ತೆ ಮಾರ್ಗವನ್ನು ಏಕ ಮುಖ ಸಂಚಾರಿಸುವುದು.
ಜಾತ್ರಾ ಪ್ರಯುಕ್ತ ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಗಸೇಬಾಗಿಲ್ ಚರ್ಚ ಕ್ರಾಸ್‌ದಿಂದ ದೈವಜ್ಞ ಕಲ್ಯಾಣ ಮಂಟಪದ ಕ್ರಾಸ್ ವರೆಗೆ ವಾಹನಗಳನ್ನು ಈ ಮಾರ್ಗವಾಗಿ ಸಂಚರಿಸದೇ, ಪಾರ್ಕಿಂಗ್ ಸ್ಥಳದಿಂದ ದೈವಜ್ಞ ಕಲ್ಯಾಣ ಮಂಟಪದ ಮಾರ್ಗವಾಗಿ ಅಗಸೇಬಾಗಿಲ್ ಚರ್ಚ ಕ್ರಾಸ್‌ದಿಂದ ನಿರ್ಗಮಿಸುವ ವಾಹನಗಳು ಏಕ ಮುಖವಾಗಿ ಸಂಚರಿಸುವುದು.

ಈ ಅವಧಿಯಲ್ಲಿ ಪೊಲೀಸ್ ಇಲಾಖೆಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಿ, ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ವಾಹನಗಳ ಚಲನ-ವಲನಗಳ ನಿಗಾವಹಿಸಿ ಯಾವುದೇ ತರಹದ ಅಪಘಾತ ಆಗದಂತೆ ಕ್ರಮವಹಿಸುವವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಶ್ರೀ ಮಾರಿ ಜಾತ್ರೆ; ಮದ್ಯ ಮಾರಾಟ ನಿಷೇಧ..!
ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದ ಸಮಯದಲ್ಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಫೆ.24 ರ ರಾತ್ರಿ 10 ಗಂಟೆಯಿಂದ ಫೆ.25 ರ ರಾತ್ರಿ 10 ಗಂಟೆಯವರೆಗೆ ಹಾಗೂ ಮಾ.3 ರ ರಾತ್ರಿ 10 ಗಂಟೆಯಿಂದ ಮಾ.4 ರ ರಾತ್ರಿ 10 ಗಂಟೆಯವರೆಗೆ ಶಿರಸಿ ತಾಲ್ಲೂಕಿನ ಶಹರ ವ್ಯಾಪ್ತಿಯಲ್ಲಿನ ಇರುವ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಮದ್ಯ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.