Achievement News : ಮಂಗಳೂರು : ಮಂಗಳೂರಿನ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಬಿಎ ವಿದ್ಯಾರ್ಥಿನಿ ರೆಮೋನಾ ಎವೆಟ್ ಪಿರೇರಾ, 170 ಗಂಟೆಗಳ ಭರತನಾಟ್ಯದ ನೃತ್ಯ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಇದು ವಿಶ್ವದಲ್ಲೇ ಮೊದಲನೆಯದು.

ಈ ದಾಖಲೆಯ ಪ್ರಯಾಣವು ಜುಲೈ 21 ರಂದು ಆರಂಭವಾಯಿತು. ಜುಲೈ 21 ರಂದು ಬೆಳಿಗ್ಗೆ 10:30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೆರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಅವರು ಜುಲೈ 28ರ ವರೆಗೆ ನಿರಂತರವಾಗಿ ನಾಟ್ಯ ಪ್ರದರ್ಶನ ನೀಡಿದ್ದಾರೆ.

ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳು, ಅಲ್ಲದೆ, ಸೆಮಿಕ್ಲಾಸಿಕ್, ದೇವರ ನಾಮಗಳನ್ನು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊಂದರಂತೆ ಜೋಡಿಸಲಾಗುತಿತ್ತು.

ಗಣೇಶನಿಗೆ ಸಾಂಪ್ರದಾಯಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಭರತನಾಟ್ಯ ಪ್ರದರ್ಶನ ನಿರಂತರ ಏಳು ದಿನಗಳ ನಂತರ, ಸೋಮವಾರ ಮಧ್ಯಾಹ್ನ, ಶಕ್ತಿಯನ್ನು ಸಂಕೇತಿಸುವ ದುರ್ಗಾ ದೇವಿಗೆ ಗೌರವ ಸಲ್ಲಿಕೆಯೊಂದಿಗೆ ಕೊನೆಗೊಂಡಿತು.

ರೆಮೋನಾ 10, 200 ನಿಮಿಷಗಳ ಕಾಲ ನಿರಂತರವಾಗಿ ಪ್ರದರ್ಶನ ನೀಡಿದರು, ಪ್ರತಿ ಮೂರು ಗಂಟೆಗಳಿಗೊಮ್ಮೆ ಕೇವಲ 15 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಅತೀ ಹೆಚ್ಚಾಗಿ ಬೇಯಿಸಿದ ಅನ್ನವನ್ನು ಸೇವಿಸುತ್ತಿದ್ದರು. ಇದಕ್ಕೆಂದು ಅವರು ಹಲವಾರು ತಿಂಗಳಿನಿಂದ ಆಹಾರ ಕ್ರಮವನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಅವರು ಭರತನಾಟ್ಯದಲ್ಲಿ ಸಂಕೀರ್ಣವಾದ ಪಾದಚಲನೆ (ಅಡವುಗಳು), ಮುಖದ ಅಭಿವ್ಯಕ್ತಿಗಳು (ಅಭಿನಯ), ಮುದ್ರೆಗಳು ಮತ್ತು ದೈಹಿಕ ಭಂಗಿಗಳು (ಕರಣಗಳು) ಒಳಗೊಂಡಂತೆ ಎಲ್ಲವನ್ನೂ ಮಾಡಿದರು.

ಅವರ ಪ್ರದರ್ಶನವು ಕೇವಲ ದೈಹಿಕ ಸವಾಲಾಗಿರಲಿಲ್ಲ; ಅದು ಅಚಲವಾದ ಮಾನಸಿಕ ಗಮನ ಮತ್ತು ಭಾವನಾತ್ಮಕ ಶಕ್ತಿಯನ್ನು ಬಯಸಿತ್ತು. ಅವರ ಗುರುಗಳಾದ ಡಾ. ಶ್ರೀವಿದ್ಯಾ ಮುರಳೀಧರ ಇದನ್ನು “ದೈವಿಕ ಸಾಧನೆ” ಮತ್ತು ತುಳುನಾಡು ಮತ್ತು ಭಾರತೀಯ ಸಂಸ್ಕೃತಿಗೆ ಒಂದು ಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ.

13 ವರ್ಷಗಳಿಂದ ಭರತನಾಟ್ಯ ಅಭ್ಯಾಸ
ರೆಮೋನಾ ಪಿರೇರಾ ಮೂರು ವರ್ಷದ ಬಾಲಕಿಯಾಗಿದ್ದಾಗಲೇ ಭರತ ನಾಟ್ಯ ಕಲಿಕೆ ಆರಂಭಿಸಿದ್ದರು. ಕಳೆದ 13 ವರ್ಷಗಳಿಂದ ಯೆಯ್ನಾಡಿ ಸೌರಭ ಕಲಾಪರಿಷತ್ತಿನ ಡಾ. ಶ್ರೀವಿದ್ಯಾ ಅವರಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. 2019ರಲ್ಲಿ ರೆಮೋನಾ ಪೆರೇರಾ ರಂಗಪ್ರವೇಶ ಮಾಡಿದ್ದಾರೆ.

ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತಿರುವ ಅವರು, ಯಕ್ಷಗಾನ, ಪಾಶ್ಚಾತ್ಯ, ಸಮಕಾಲೀನ ನೃತ್ಯಗಳು, ಸಾಹಸ ನೃತ್ಯವನ್ನು ಸಹ ಮಾಡುತ್ತಾರೆ. ಸದ್ಯ ಅವರು ಭರತನಾಟ್ಯದಲ್ಲಿ ವಿದ್ವತ್ ತಯಾರಿಯಲ್ಲಿದ್ದಾರೆ.
ರೆಮೋನಾ ಅವರು ವಿಶ್ವದಾಖಲೆ ನಿರ್ಮಿಸಲು ಪ್ರತೀ ದಿನ ಸುಮಾರು 5ರಿಂದ 6 ಗಂಟೆಗಳ ಕಾಲ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದರು.

ಮಂಗಳೂರಿನ ನಗರದ ಗ್ಲಾಡಿಸ್ ಪಿರೇರಾ ಅವರ ಪುತ್ರಿಯಾಗಿರುವ ರೆಮೋನಾ ಭರತನಾಟ್ಯದಲ್ಲಿ 2017ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್, 2017ರಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್- ಲಂಡನ್, 2017ರಲ್ಲಿ ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ನಮೂದಿಸಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪ್ರಧಾನಮಂತ್ರಿ ಅತ್ಯುನ್ನತ ಬಾಲ ಪುರಸ್ಕಾರ ಹಾಗೂ ರಾಜ್ಯ ಸರ್ಕಾರ ನೀಡುವ ಬಾಲಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನ ಭಾರತದ ಪ್ರತಿನಿಧಿ ಡಾ. ಮನೀಶ ವಿಷ್ಣೋಯ್ ಪ್ರಮಾಣಪತ್ರ ಪ್ರದಾನ ಮಾಡಿ, “ಅವಳು 120 ಗಂಟೆಗಳ ನಂತರ ಅರ್ಹಳಾಗಿದ್ದಳು. ಆದರೆ ಅವಳು ಏಳು ಪೂರ್ಣ ದಿನಗಳವರೆಗೆ ನೃತ್ಯ ಮಾಡಲು ಬಯಸಿದಳು. ಅದು ಅಪರೂಪದ ದೃಢನಿಶ್ಚಯ” ಎಂದು ಹೇಳಿದ್ದಾರೆ.

error: Content is protected !!