Dasara Festival News : ಮೈಸೂರು: ಅದ್ಧೂರಿ ಹಾಗೂ ಸಾಂಪ್ರದಾಯಿಕ ನಾಡಹಬ್ಬ ಸಮೀಪಿಸುತ್ತಿದ್ದು, ಈ ಬಾರಿಯ ಜಂಬೂ ಸವಾರಿಯಲ್ಲಿ ಭಾಗವಹಿಸಲು ಈಗಾಗಲೇ 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಗಜಪಡೆಯ ಮುಂದಾಳತ್ವವನ್ನು ಅಭಿಮನ್ಯು ವಹಿಸಲಿದ್ದಾನೆ. ಕ್ಯಾಪ್ಟನ್​ ಅಭಿಮನ್ಯು ಸೇರಿದಂತೆ ಗಜಪಡೆಯಲ್ಲಿ 10 ಗಂಡಾನೆ ಹಾಗೂ 4 ಹೆಣ್ಣಾನೆಗಳಿವೆ.

ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ. ಈ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಯ 14 ಆನೆಗಳನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಿದೆ. ಈ ಆನೆಗಳು ಎಷ್ಟು ವರ್ಷದಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ. ಇವುಗಳ ವಯಸ್ಸು, ಎತ್ತರ ಹಾಗೂ ತೂಕದ ಜೊತೆಗೆ ಯಾವ ಶಿಬಿರದಿಂದ ಬಂದಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ಯಾಪ್ಟನ್​ ಅಭಿಮನ್ಯು: ಗಂಡಾನೆ; 29 ವರ್ಷಗಳು; 2.72 ಮೀ ಎತ್ತರ; 3.51 ಮೀ ಉದ್ದ; 4,920 ಕೆ.ಜಿ. ಅಂದಾಜು ತೂಕ.

ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಅಭಿಮನ್ಯುವನ್ನು 1970ರಲ್ಲಿ ಕೊಡಗು ಹೆಬ್ಬಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. 2012ರಿಂದ ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, 2015ರವರೆಗೆ ಕರ್ನಾಟಕ ವಾದ್ಯಗೋಷ್ಠಿಯ ಗಾಡಿ ಎಳೆಯುವ ಪ್ರಮುಖ ಜವಾಬ್ದಾರಿ ನಿಭಾಯಿಸಿದೆ. ಇದುವರೆಗೆ 140-150 ಕಾಡಾನೆಗಳು ಮತ್ತು 40-50 ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದೆ.

ಐದು ವರ್ಷಗಳಿಂದ, ಚಿನ್ನದ ಅಂಬಾರಿ ಹೊರುವ ಗೌರವದ ಜವಾಬ್ದಾರಿಯನ್ನು ಈ ಆನೆಗೆ ನೀಡಲಾಗಿದೆ. ಶಿಸ್ತು, ಶಕ್ತಿಯುತ ದೇಹಪಟು ಮತ್ತು ಅನುಭವದ ಮೇಲೆ ಅಂಬಾರಿ ಆನೆ ಎಂಬ ಸ್ಥಾನವನ್ನು ಅಲಂಕರಿಸಿದೆ. ಮಾವುತ ವಸಂತ ಜೆ.ಎಸ್ ಹಾಗೂ ಕಾವಡಿ ರಾಜು.

ಕಳೆದ ಬಾರಿಯ ನಿಶಾನೆ ಆನೆ ಧನಂಜಯ: ಗಂಡಾನೆ; 45 ವರ್ಷಗಳು; 2.80 ಮೀ ಎತ್ತರ; 3.84 ಮೀ. ಉದ್ದ; 4,050 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯದ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿದೆ. ಏಳು ವರ್ಷಗಳಿಂದ ಮೈಸೂರಿನ ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದೆ. ಮಾವುತ ಭಾಸ್ಕರ್ ಜೆ.ಸಿ ಹಾಗೂ ಕಾವಾಡಿ ರಾಜಣ್ಣ ಜೆ.ಎಸ್.

ಕಳೆದ ಬಾರಿಯ ಅರಮನೆಯ ನಿಶಾನೆ ಆನೆ ಭೀಮ: ಗಂಡಾನೆ; 25 ವರ್ಷಗಳು; 2.85 ಮೀ. ಎತ್ತರ, 3.05 ಮೀ ಉದ್ದ; 5,300 ಕೆ.ಜಿ. ಅಂದಾಜು ತೂಕ.

ಮತ್ತಿಗೋಡು ಶಿಬಿರದ ಆನೆ ಭೀಮ. 2000ದಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ತಾಯಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಚಿಕ್ಕ ಮರಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಸಿಕ್ಕಿತು. ಅರಣ್ಯ ಇಲಾಖೆಯು ಆನೆ ಶಿಬಿರದಲ್ಲಿ ಮರಿಯನ್ನು ಪೋಷಿಸಿ ಬೆಳೆಸಿತು. ಅನೇಕ ಪ್ರಮುಖ ಕಾರ್ಯಾಚರಣೆಗಳಲ್ಲಿ, ಕಾಡಾನೆಗಳು ಮತ್ತು ಹುಲಿಗಳನ್ನು ಸೆರೆಹಿಡಿಯುವ ಅಪಾಯಕಾರಿ ಹಾಗೂ ಜವಾಬ್ದಾರಿಯುತ ಕಾರ್ಯಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ.

2017ರ ದಸರಾದಲ್ಲಿ ಈ ಆನೆ ಮೊದಲ ಬಾರಿಗೆ ಸಾಲಾನೆಯಾಗಿ ಭಾಗವಹಿಸಿತು. 2022ರಲ್ಲಿ ಪಟ್ಟದಾನೆ ಹಾಗೂ ಸಾಲಾನೆ ಸ್ಥಾನ ದೊರೆಯಿತು. ಮಾವುತ ಗುಂಡ ಮತ್ತು ಕಾವಾಡಿ ನಂಜುಂಡಸ್ವಾಮಿ.

ಕಳೆದ ಬಾರಿಯ ಅರಮನೆಯ ಪಟ್ಟದ ಆನೆ ಕಂಜನ್: ಗಂಡಾನೆ; 26 ವರ್ಷಗಳು; 2.89 ಮೀ. ಎತ್ತರ; 3.05 ಮೀ. ಉದ್ದ, 3,900 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಕಂಜನ್ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಯಸಳೂರು ಬಳಿ ಅರಣ್ಯ ಇಲಾಖೆ ಸೆರೆಹಿಡಿಯಲಾಯಿತು. ಕಳೆದ ಎರಡು ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಭಾಗವಹಿಸುತ್ತಿದ್ದು, ಶಾಂತನಡತೆ ಮತ್ತು ಆಜ್ಞಾಪಾಲನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವರ್ಷವೂ ಈ ಆನೆ ದಸರಾ ಜಾತ್ರೆಯಲ್ಲಿ ಭಾಗವಹಿಸುತ್ತಿದೆ. ಮಾವುತ ಜೆ.ಡಿ.ವಿಜಯ ಮತ್ತು ಕಾವಾಡಿ ಕಿರಣ್​.

ಕಳೆದ ಬಾರಿಯ ಸಾಲಾನೆ ಏಕಲವ್ಯ: ಗಂಡಾನೆ; 40 ವರ್ಷಗಳು; 2.86 ಮೀ. ಎತ್ತರ; 2.95 ಮೀ ಉದ್ದ; 5,150 ಕೆ.ಜಿ. ಅಂದಾಜು ತೂಕ.

ದೊಡ್ಡಹರವೆ ಶಿಬಿರದ ಏಕಲವ್ಯ ಆನೆಯನ್ನು 2022ರಲ್ಲಿ ಮೂಡಿಗೆರೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಸೆರೆಹಿಡಿಯಿತು. ಒಂದೂವರೆ ವರ್ಷದಲ್ಲಿ ಅತ್ಯಂತ ಶಿಸ್ತು ಮತ್ತು ಶಾಂತ ನಡತೆಯಿಂದ ಪೂರ್ಣ ಪಳಗಿ, ದಸರಾ ಸಾಲಾನೆಯಾಗಿ ಆಯ್ಕೆಯಾಯಿತು. ಎರಡನೇ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಸೆರೆಹಿಡಿದ ಕಡಿಮೆ ಅವಧಿಯಲ್ಲಿ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾವುತ ಇದಾಯತ್.ಎಸ್ ಮತ್ತು ಕಾವಾಡಿ ಸೃಜನ್.

ಕಳೆದ ಬಾರಿಯ ಸಾಲಾನೆ ಪ್ರಶಾಂತ: ಗಂಡಾನೆ; 53 ವರ್ಷಗಳು; 2.61 ಮೀ ಎತ್ತರ; 3.46 ಮೀ ಉದ್ದ; 4,650 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಪ್ರಶಾಂತ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಸೆರೆಹಿಡಿಯಿತು. ಪ್ರಬಲ ದೇಹ ಹಾಗೂ ಗಂಭೀರ ನಡವಳಿಕೆಯುಳ್ಳ ಆನೆಯನ್ನು, ಶೀಘ್ರ ಪಳಗಿಸಿ ವಿಶಿಷ್ಟ ತರಬೇತಿಗೆ ಒಳಪಡಿಸಲಾಯಿತು. ಬಲಿಷ್ಠ ಹಾಗೂ ನಂಬಿಕಸ್ಥ ಆನೆಯಾಗಿ ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿ ಮೌಲ್ಯಯುತ ಸೇವೆ ಸಲ್ಲಿಸಿದೆ.

ಕಳೆದ 15 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದು, ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಶಿಸ್ತುಬದ್ಧ ನಡೆ, ಸತತ ಸೇವೆ ಮತ್ತು ಆಜ್ಞಾಪಾಲನೆ ಆನೆಯನ್ನು ದಸರಾ ಆನೆಗಳ ಪೈಕಿ ಅತ್ಯಂತ ನಂಬಿಕಸ್ಥ ಸದಸ್ಯನನ್ನಾಗಿ ಪರಿಗಣಿಸಿದೆ. ಪ್ರತಿ ದಸರಾ ಮೆರವಣಿಗೆಯಲ್ಲಿ ಇದೊಂದು ಶಾಂತಿಯುತ ಶಕ್ತಿಯ ಸಂಕೇತ. ಮಾವುತ ಜೆ.ಎ.ಚಿನ್ನಪ್ಪ ಮತ್ತು ಕಾವಾಡಿ ಚಂದ್ರ.

ಕಳೆದ ಬಾರಿಯ ಸಾಲಾನೆ ಆನೆ ಮಹೇಂದ್ರ: ಗಂಡಾನೆ; 42 ವರ್ಷಗಳು; 2.75 ಮೀ ಎತ್ತರ, 3.25 ಮೀ ಉದ್ದ, 4,850 ಕೆ.ಜಿ. ಅಂದಾಜು ತೂಕ.

ಬಳ್ಳೆ ಶಿಬಿರದ ಮಹೇಂದ್ರ ಆನೆಯನ್ನು 2018ರಲ್ಲಿ ರಾಮನಗರದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸೆರೆಹಿಡಿಯಿತು. 2022-23ನೇ ಸಾಲಿನಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಭಾಗವಹಿಸಿತು. ಅದೇ ವರ್ಷ ಶ್ರೀರಂಗಪಟ್ಟಣದ ಗ್ರಾಮೀಣ ದಸರಾ ಉತ್ಸವದಲ್ಲಿ ಮರದ ಅಂಬಾರಿ ಹೊರುವ ಗೌರವ ಲಭಿಸಿತು. ನಂತರವೂ ಹಲವಾರು ಗ್ರಾಮೀಣ ದಸರಾ ಉತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಅಪಾಯಕಾರಿ ಕಾರ್ಯಾಚರಣೆಗಳಲ್ಲೂ ಇದು ಭಾಗವಹಿಸಿದೆ. ಮಾವುತ ರಾಜಣ್ಣ ಮತ್ತು ಕಾವಾಡಿ ಮಲ್ಲಿಕಾರ್ಜುನ.

ಕಳೆದ ಬಾರಿಯ ನೌಫತ್ನೆ ಆನೆ ಗೋಪಿ: ಗಂಡಾನೆ; 42 ವರ್ಷಗಳು; 2.50 ಮೀ ಎತ್ತರ; 3.42 ಮೀ ಉದ್ದ; 3,710 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಗೋಪಿ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸೆರೆಹಿಡಿಯಿತು. ದುಬಾರೆ ಶಿಬಿರದಲ್ಲಿ ಶಿಸ್ತಿನ ತರಬೇತಿ ನೀಡಲಾಗಿದ್ದು, ಅಲ್ಲಿಯ ಸಫಾರಿ ಸೇವೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆನೆ ಕಳೆದ 14 ವರ್ಷಗಳಿಂದ ನಿರಂತರವಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

2015ರಿಂದ, ಈ ಆನೆಗೆ ಪಟ್ಟದ ಆನೆಯ ಜೊತೆ ನಿಶಾನೆ ಆನೆಯಾಗಿ ಅರಮನೆ ಆವರಣದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವ ಗೌರವ ಲಭಿಸಿದೆ. ನಿಶಾನೆ ಆನೆಯಾಗಿ, ರಾಜದರ್ಶನ ಹಾಗೂ ಧಾರ್ಮಿಕ ವಿಧಿಗಳ ಸಂದರ್ಭ ಶಾಂತ ಮತ್ತು ಗಂಭೀರವಾಗಿ ವರ್ತಿಸುತ್ತದೆ. ಅರಣ್ಯವಾಸದಿಂದ ಅರಮನೆಯ ಪೂಜಾ ವೇದಿಕೆವರೆಗೆ ಈ ಆನೆಯ ಪಯಣ ಒಂದು ಸ್ಮರಣೀಯ ಯಶೋಗಾಥೆ. ಮಾವುತ ಪಿ.ಬಿ.ನವೀನ್ ಕುಮಾರ್ ಮತ್ತು ಕಾವಾಡಿ ಶಿವು ಜೆ.ಆರ್.

ಕಳೆದ ಬಾರಿಯ ಸಾಲಾನೆ ಸುಗ್ರೀವ: ಗಂಡಾನೆ; 43 ವರ್ಷಗಳು; 2.95 ಮೀ ಎತ್ತರ; 3.25 ಮೀ ಉದ್ದ; 4,100 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಸುಗ್ರೀವ ಆನೆಯನ್ನು 2016ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಅರಣ್ಯ ವಲಯದಲ್ಲಿ ಸೆರೆಹಿಡಿಯಲಾಯಿತು. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಮೆರವಣಿಗೆಯಲ್ಲಿ ತನ್ನ ಶಕ್ತಿಯುತ ಹಾಗೂ ಸ್ಥಿರ ನಡವಳಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜನಸಂದಣಿಯ ನಡುವೆಯೂ ಶಾಂತವಾಗಿ ನಡೆದು, ನಿಸ್ಸಿಂಧ ಶಬ್ದಗಳಿಗೂ ತಟ್ಟದೆ ಪ್ರತಿಕ್ರಿಯಿಸುವ ಧೈರ್ಯ ಈ ಆನೆಯ ಬಲವಾಗಿದೆ. ಮಾವುತ ಜೆ.ಬಿ.ಶಂಕರ್ ಮತ್ತು ಕಾವಾಡಿ ರಾಜು.ಜೆ.ಬಿ.

ಮೊದಲ ಬಾರಿ ಭಾಗವಹಿಸುತ್ತಿರುವ ಆನೆ ಶ್ರೀಕಂಠ: ಗಂಡಾನೆ; 56 ವರ್ಷಗಳು; 2.86 ಮೀ ಎತ್ತರ, 3.25 ಮೀ ಉದ್ದ; 5,500 ಕೆ.ಜಿ. ಅಂದಾಜು ತೂಕ.

ಮತ್ತಿಗೋಡು ಶಿಬಿರದ ಶ್ರೀಕಂಠ ಆನೆಯನ್ನು 2014ರಲ್ಲಿ ಹಾಸನ ವಿಭಾಗದ ಶನಿವಾರ ಸಂತೆ ವಲಯದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ತಂಡ ಸೆರೆಹಿಡಿದಿತ್ತು. ಉತ್ತಮ ಎತ್ತರ, ಬಲಿಷ್ಠ ಶರೀರ, ಶಾಂತ ಸ್ವಭಾವ ಮತ್ತು ಮನುಷ್ಯರೊಂದಿಗೆ ಸುಲಭವಾಗಿ ಹೊಂದಿಕೆಯಾಗುವ ಗುಣಗಳಿರುವ ಈ ಆನೆ ಇದೀಗ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದೆ. ಇದರ ಮಾವುತ ಜೆ.ಆರ್.ರಾಧಾಕೃಷ್ಣ ಮತ್ತು ಕಾವಾಡಿ ಓಂಕಾರ್.ಕೆ.

ಕಳೆದ ಬಾರಿಯ ಕುಮ್ಕಿ ಆನೆ ಬಳ್ಳೆ ಲಕ್ಷ್ಮಿ: ಹೆಣ್ಣಾನೆ; 54 ವರ್ಷಗಳು; 2.52 ಮೀ ಎತ್ತರ; 2.85 ಮೀ ಉದ್ದ; 3,200 ಕೆ.ಜಿ. ಅಂದಾಜು ತೂಕ.

ಬಳ್ಳೆ ಶಿಬಿರದ ಲಕ್ಷ್ಮಿ ಆನೆಯನ್ನು ಈ ಹಿಂದೆ ಸರ್ಕಸ್​ಗಾಗಿ ಬಳಸಲಾಗುತ್ತಿದ್ದು, ಮಾನವ ಸಂಪರ್ಕಕ್ಕೆ ನಿಕಟವಾಗಿರುವುದರಿಂದ ಹಲವಾರು ಶಬ್ದಗಳು ಹಾಗೂ ಜನಜಂಗುಳಿ ಇದಕ್ಕೆ ಪರಿಚಿತವಾಗಿತ್ತು. 2015ರಲ್ಲಿ ಅರಣ್ಯ ಇಲಾಖೆ ಈ ಆನೆಯನ್ನು ವಶಕ್ಕೆ ತೆಗೆದುಕೊಂಡು, ತರಬೇತಿ ನೀಡಿತು. ಇಂದು ಆನೆ ಆರೋಗ್ಯವಂತವಾಗಿದ್ದು, ವಾಹನಗಳ ಸದ್ದು, ಪಟಾಕಿಗಳ ಗದ್ದಲಕ್ಕೂ ಅಂಜದೆ ನಿಶ್ಚಲವಾಗಿ ನಿಲ್ಲುವ ಶಾಂತ ಸ್ವಭಾವ ಹೊಂದಿದೆ. ಎರಡನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ. ಅರಣ್ಯ ಇಲಾಖೆಯ ನಂಬಿಕಸ್ಥ ಆನೆ ಎಂಬ ಸ್ಥಾನ ಸಂಪಾದಿಸಿದೆ. ಇದರ ಮಾವುತ ಸಣ್ಣಪ್ಪ ಮತ್ತು ಕಾವಾಡಿ ಮಂಜು.

ಕುಮ್ಕಿ ಆನೆಯಾಗಿ ಭಾಗವಹಿಸಿದ್ದ ಕಾವೇರಿ: ಹೆಣ್ಣಾನೆ; 45 ವರ್ಷಗಳು; 2.50 ಮೀ ಎತ್ತರ; 3.32 ಮೀ ಉದ್ದ; 3,000 ಕೆ.ಜಿ. ಅಂದಾಜು ತೂಕ.

ದುಬಾರೆ ಶಿಬಿರದ ಕಾವೇರಿ ಆನೆಯನ್ನು ಫೆಬ್ರವರಿ 2009ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸೆರೆಹಿಡಿಯಿತು. ಕಳೆದ ಹಲವು ದಸರಾ ಮಹೋತ್ಸವಗಳಲ್ಲಿ ಭಾಗವಹಿಸಿಕೊಂಡು ಬರುತ್ತಿದೆ. ತನ್ನ ಶಿಸ್ತು, ಶಾಂತ ನಡವಳಿಕೆಯಿಂದ ಎಲ್ಲಾ ಬಾರಿಯೂ ಗಮನ ಸೆಳೆದಿದೆ. ಪ್ರಸ್ತುತ ದಸರಾದಲ್ಲಿ ಭಾಗವಹಿಸುವ ಉದ್ದೇಶದಿಂದ ಈ ಆನೆಯನ್ನು ಮತ್ತೆ ಆಯ್ಕೆ ಮಾಡಲಾಗಿದೆ. ಇದರ ಮಾವುತ ಜೆ.ಡಿ. ದೋಭಿ ಮತ್ತು ಕಾವಾಡಿ ಸಂಜನ್.ಜೆ.ಎ.

ಪ್ರಥಮ ಬಾರಿ ಭಾಗವಹಿಸುತ್ತಿರುವ ಆನೆ ರೂಪಾ: ಹೆಣ್ಣಾನೆ; 44 ವರ್ಷಗಳು; 2.45 ಮೀ ಎತ್ತರ; 2.90 ಮೀ ಉದ್ದ; 3,500 ಕೆ.ಜಿ. ಅಂದಾಜು ತೂಕ.

ರೂಪ ಆನೆಯನ್ನು 2016ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸರ್ಕಸ್ ಕಂಪನಿಯಿಂದ ರಕ್ಷಿಸಿ, ಅರಣ್ಯ ಇಲಾಖೆಯವರು ಆನೆ ಶಿಬಿರಕ್ಕೆ ಸ್ಥಳಾಂತರಿಸಿದರು. ಶಿಬಿರದಲ್ಲಿ ಸಿಕ್ಕ ತರಬೇತಿಯಿಂದ ಆನೆ ಶಾಂತ ಮತ್ತು ಮನುಷ್ಯರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ಗುಣಗಳನ್ನು ಮೈಗೂಡಿಸಿಕೊಂಡಿತು. ಈ ಗುಣಾತ್ಮಕ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಆನೆಗೆ ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. ಇದರ ಮಾವುತ ಮಂಜುನಾಥ ಮತ್ತು ಕಾವಾಡಿ ಮಂಜು.

ಮೊದಲ ಬಾರಿ ಭಾಗವಹಿಸುತ್ತಿರುವ ಆನೆ ಹೇಮಾವತಿ: ಹೆಣ್ಣಾನೆ; 11 ವರ್ಷಗಳು; 2.25 ಮೀ ಎತ್ತರ, 2.8 ಮೀ ಉದ್ದ, 2,500 ಕೆ.ಜಿ. ಅಂದಾಜು ತೂಕ.

ಹೇಮಾವತಿ ಆನೆ 2014ರ ನವೆಂಬರ್​ನಲ್ಲಿ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರಿ ಆನೆ ಶಿಬಿರದಲ್ಲಿ ಜನಿಸಿತು. ಶುರುವಿನಿಂದಲೇ ಉತ್ತಮ ಆರೈಕೆ ಹಾಗೂ ಪ್ರೀತಿಯೊಂದಿಗೆ ಬೆಳೆದು ಬಂದ ಆನೆ. ಶಿಬಿರದ ವಾತಾವರಣಕ್ಕೆ ಹೊಂದಿಕೊಂಡ ಈ ಆನೆ, ವರ್ಷಗಳಿಂದ ಮಾವುತರು ನೀಡಿದ ನಿತ್ಯದ ತರಬೇತಿಯಿಂದ ಶಿಸ್ತು, ಶಾಂತ ಸ್ವಭಾವ ಮತ್ತು ಕೌಶಲ್ಯಗಳ ಮೂಲಕ ಗಮನ ಸೆಳೆದಿದೆ.

error: Content is protected !!