ಮುಂಡಗೋಡ ಪೊಲೀಸರ ಭರ್ಜರಿ ದಾಳಿ, ಪಾಳಾ ಕ್ರಾಸ್ ಬಳಿ ಗಾಂಜಾ ಸಾಗಿಸ್ತಿದ್ದ ಹಾನಗಲ್ಲಿ‌ನ ಇಬ್ಬರ ಬಂಧನ..!

Mundgod Police Raid; ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಾಲು ಸಮೇತ, ಬೈಕಿನೊಂದಿಗೆ ಬಂಧಿಸಿದ್ದಾರೆ. ಈ ಕೇಸಲ್ಲಿ ಇನ್ನುಳಿದಂತೆ ಪ್ರಮುಖ ಡ್ರಗ್ ಪೆಡ್ಲರ್ ಗಾಗಿ ಬಲೆ ಬೀಸಿದ್ದಾರೆ‌.

ಅಂದಹಾಗೆ, ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಹತ್ತಿರ ಆರೋಪಿಗಳಾದ ಹಾವೇರಿ ಜಿಲ್ಲೆಯ ಹಾನಗಲ್ಲಿನ ಮುಜಾಫರ್ ಅಹ್ಮದ್ ಮಕ್ಖೂಲ್ ಅಹ್ಮದ್ ಬ್ಯಾಡಗಿ (28) ಹಾಗೂ ಪ್ರಶಾಂತ ಮಾರ್ತಾಂಡಪ್ಪ ಅಕ್ಕಿವಳಿ(20) ಎಂಬುವವರನ್ನು ಬಂಧಿಸಲಾಗಿದೆ.

ಆತ ಚೋರ್ ಇಮ್ರಾನ್.!
ಅಸಲು, ಹಾನಗಲ್ ನಿಂದ ಹುಬ್ಬಳ್ಳಿ ಕಡೆಗೆ ಗಾಂಜಾ ಮಾರಾಟ ಮಾಡಲು ಹೊರಟಿದ್ದವರ ಹಿಂದೆ, ಹಾನಗಲ್ಲಿನ ಚೋರ್ ಇಮ್ರಾನ್ ಕೈಚಳಕ ಇತ್ತು. ಆತನಿಂದಲೇ ಗಾಂಜಾ ಪಡೆದುಕೊಂಡು ಮಾರಾಟ ಮಾಡಲು ಹೊರಟಿದ್ದ ಇಬ್ಬರು ಮುಂಡಗೋಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.

60 ಸಾವಿರ ಮೌಲ್ಯದ್ದು..!
ಇನ್ನು, ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಬಳಿ PSI ಪರಶುರಾಮ್ ಮಿರ್ಜಿಗಿ, ಮತ್ತವರ ಕ್ರೈಂ ಟೀಂ ಗೆ ಸಿಕ್ಕಿಬಿದ್ದಿರೋ ಆರೋಪಿಗಳ ಹತ್ರ ಇದ್ದ ಗಾಂಜಾ ಹಾನಗಲ್ಲಿನಿಂದ ಬಂದಿತ್ತು. ಅಲ್ಲಿನ “ಚೋರ್” ಇಮ್ರಾನ್ ಎಂಬುವ ದಂಧೆಕೋರನಿಂದ ಕೈ ಬದಲಾಗಿತ್ತು ಅನ್ನೋ ಮಾಹಿತಿ ಸಿಕ್ಕಿದೆ. ಅಂದಹಾಗೆ, ಹಾಗೆ ಸಿಕ್ಕಿರೋ 900 ಗ್ರಾಂ ಗಾಂಜಾದ ಇವತ್ತಿನ ಕಿಮ್ಮತ್ತು ಏನಿಲ್ಲವೆಂದರೂ 60 ಸಾವಿರ ರೂಪಾಯಿ.

ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ, ಹಾಗೂ ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲರವರ ಮಾರ್ಗದರ್ಶನದಲ್ಲಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮೋಟಾರ್ ಮೇಲಾಗಿ ಸಾಗಾಟ ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐ ಪರಶುರಾಮ ಮಿರ್ಜಿಗಿ ಹಾಗೂ ಸಿಬ್ಬಂದಿಗಳಾದ ಮಂಜಪ್ಪ ಚಿಂಚಿಲಿ, ಕೊಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ಮಂಜುನಾಥ ಓಣಿಕೇರಿ ಹಾಗೂ ಬಸವರಾಜ ಒಡೆಯರ್ ಸೇರಿ ಹಲವರು ಭಾಗಿಯಾಗಿದ್ರು.