ED Raid; ಕಾರವಾರ -ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಸದಾಶಿವಗಡದಲ್ಲಿರುವ ಮನೆಯ ಮೇಲೆ ಬೆಳಿಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಪಾಸಣೆ ನಡೆದಿದೆ ಎನ್ನಲಾಗಿದೆ. ದಾಳಿಯ ಸಮಯದಲ್ಲಿ ಶಾಸಕ ಸತೀಶ್ ಸೈಲ್ ಅವರು ಅಧಿವೇಶನಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಕಾರಣ ಮನೆಯಲ್ಲಿ ಇರಲಿಲ್ಲ.
ಇಡಿ ಅಧಿಕಾರಿಗಳ ತಂಡವು 4-6 ಕಾರುಗಳಲ್ಲಿ ಬಂದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ, ಮತ್ತು ಮನೆಯ ಮುಂಭಾಗದಲ್ಲಿ ಸಿಐಎಸ್ಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಪ್ರಕರಣದಲ್ಲಿ ಸತೀಶ್ ಸೈಲ್ ಅವರು ಈ ಹಿಂದೆ ಜಾಮೀನಿನ ಮೇಲೆ ಹೊರಗಿದ್ದರು. ಇದಕ್ಕೂ ಮೊದಲು, ಬೇಲೆಕೇರಿ ಅದಿರು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರನ್ನು ದೋಷಿಯೆಂದು ಘೋಷಿಸಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು, ಆದರೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು.
ಈ ದಾಳಿಯು ಕರ್ನಾಟಕ, ಗೋವಾ, ಮತ್ತು ಮುಂಬೈನಲ್ಲಿ 15 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ಇಡಿ ಬೆಂಗಳೂರು ವಲಯದ ಕಚೇರಿಯಿಂದ ತಿಳಿದುಬಂದಿದೆ.