Nisar Mission: ಭೂ ವೀಕ್ಷಣಾ ಉಪಗ್ರಹ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಅನ್ನು ಇಂದು ಇಸ್ರೋ ತನ್ನ GSLV-F16 ರಾಕೆಟ್ ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುತ್ತಿದೆ.
ಈ ಉಪಗ್ರಹವನ್ನು ಸನ್-ಸಿಂಕ್ರೋನಸ್ ಆರ್ಬಿಟ್‌ನಲ್ಲಿ ಇರಿಸಲಾಗುತ್ತದೆ. ಇದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯುತ್ತಿರುವ 102ನೇ ಉಡಾವಣೆ. ಅಷ್ಟೇ ಅಲ್ಲದೇ, GSLV-F16ರ 18ನೇ ಉಡಾವಣೆಯೂ ಹೌದು. ಸನ್-ಸಿಂಕ್ರೋನಸ್ ಆರ್ಬಿಟ್‌ಗೆ ಹೋಗಲು ಇದು GSLV ರಾಕೆಟ್‌ನ ಮೊದಲ ಯೋಜನೆಯಾಗಿದೆ.
ನಿಸಾರ್ 2,392 ಕೆ.ಜಿ ತೂಕ ಹೊಂದಿದೆ.ಇಸ್ರೋ ಈ ಹಿಂದೆ ರಿಸೋರ್ಸ್‌ಸ್ಯಾಟ್ ಮತ್ತು RISAT ಸೇರಿದಂತೆ ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಿದ್ದರೂ, ಈ ಉಪಗ್ರಹಗಳಿಂದ ಸಂಗ್ರಹಿಸಿದ ದತ್ತಾಂಶ ಭಾರತದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇಸ್ರೋ ಮತ್ತು ನಾಸಾ ಜಂಟಿಯಾಗಿ ಇದೇ ಮೊದಲ ಬಾರಿಗೆ ಇಡೀ ಭೂಮಿಯ ಮೇಲೆ ಕಣ್ಗಾವಲಿಡುವ ಉಪಗ್ರಹದ ಉಡಾವಣೆ ಮಾಡುತ್ತಿವೆ.
ನಿಸಾರ್ ಪ್ರತಿ 12 ದಿನಗಳಿಗೊಮ್ಮೆ ಭೂ ಮೇಲ್ಮೈ ಮತ್ತು ಹಿಮಾವೃತ ಪ್ರದೇಶಗಳ ಮೇಲ್ಮೈಯನ್ನು ಸ್ಕ್ಯಾನ್ ಮಾಡುತ್ತದೆ. ಇದು ಒಂದು ಸೆಂಟಿಮೀಟರ್ ಮಟ್ಟದವರೆಗೆ ನಿಖರವಾದ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುವ ಸಾಮರ್ಥ್ಯ ಹೊಂದಿದೆ.