ಹೊನ್ನಾವರದಲ್ಲಿ ಭೀಕರ ಅಗ್ನಿ ದುರಂತ, ಸುಟ್ಟು ಕರಕಲಾದ ಕಾರು, ಕಾರಲ್ಲಿದ್ದ ಇಬ್ಬರು ಸಜೀವ ದಹನ..!

ಹೊನ್ನಾವರ ತಾಲೂಕಿನಲ್ಲಿ ಭೀಕರ ದುರಂತ ಸಂಭವಿಸಿದೆ. ಗೇರುಸೊಪ್ಪ-ಸುಳೆಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ಕಾರ್ ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ. ಅಷ್ಟಕ್ಕೂ, ಇದೊಂದು ಆಕಸ್ಮಿಕ ದುರಂತವೋ ಅಥವಾ ಇನ್ನೇನಾದ್ರೂ ಬೇರೆಯ ಕಾರಣವೋ ತನಿಖೆಯ ನಂತರ ತಿಳಿಯಲಿದೆ.

ಕರಕಲಾದ ಇಬ್ಬರು..!
ಅಂದಹಾಗೆ, ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದರೊಳಗಿದ್ದ ಇಬ್ಬರೂ ಕೂಡ ಸುಟ್ಟು ಕರಕಲಾಗಿದ್ದಾರೆ. ದೇಹಗಳ ಗುರುತು ಪತ್ತೆ ಸಾಧ್ಯವಾಗದ ಸ್ಥಿತಿಯಲ್ಲಿದೆ. ಬೆಂಕಿಯ ತೀವ್ರತೆಗೆ ಕಾರಿನ ನಂಬರ್ ಪ್ಲೇಟ್ ಕೂಡ ಸಂಪೂರ್ಣವಾಗಿ ಸುಟ್ಟು ಕಾಣೆಯಾಗಿದ್ದು, ವಾಹನದ ನೋಂದಣಿ ವಿವರ ಪತ್ತೆ ಕಷ್ಟವಾಗುತ್ತಿದೆ. ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದಾಪುರದವರಾ..?
ಕಾರಿನ ದುರಂತದಲ್ಲಿ ಸಜೀವ ದಹನವಾಗಿರುವವರು ಸಿದ್ದಾಪುರ ತಾಲೂಕಿನವರು ಎನ್ನಲಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಡಿಕ್ಕಿಯ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.