KDCC ಕುಸ್ತಿಯಲ್ಲಿ ಹೆಬ್ಬಾರ್ ಬಣದ್ದೇ ಮೇಲುಗೈ, ಮಂಕಾಳು ವೈದ್ಯರ ಬಣಕ್ಕೆ ನಿರಾಸೆ..!

KDCC ELECTION; ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ KDCC ಬ್ಯಾಂಕ್ ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಟೀಂ ಗೆ ನಿರಾಸೆಯಾಗಿದೆ. ಶಾಸಕ ಹಾಗೂ ಹಾಲಿ KDCC ಅಧ್ಯಕ್ಷ ಶಿವರಾಮ್ ಹೆಬ್ಬಾರರ ಬಣ ಸಧ್ಯಕ್ಕೆ ಸ್ಪಷ್ಟ ಮುನ್ನಡೆ ಸಾಧಿಸಿದಂತಾಗಿದೆ.

ಅಂದಹಾಗೆ, ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ, ಈವರೆಗೆ ಏಳು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಉಳಿದ ಕ್ಷೇತ್ರಗಳ ಮತ ಎಣಿಕೆ ಕುರಿತ ವಿಚಾರ ಕೋರ್ಟಿನಲ್ಲಿದೆ. ಹೀಗಾಗಿ, ಕೋರ್ಟ್ ತೀರ್ಮಾನದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ.

ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ಇಂದು (ಶನಿವಾರ) ಮತದಾನ ನಡೆದಿತ್ತು. ಉಪವಿಭಾಗಾಧಿಕಾರಿ ಕಾವ್ಯರಾಣಿ ಇಂದೇ ಸಂಜೆ ಮತ ಎಣಿಕೆಯ ಫಲಿತಾಂಶ ಪ್ರಕಟಿಸಿದರು. ಈ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಹೊರಬಂದ ಫಲಿತಾಂಶಗಳ ಪ್ರಕಾರ, ಶಿವರಾಮ ಹೆಬ್ಬಾರ್ ಬಣದವರು ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.

ಚುನಾವಣೆಗೂ ಮೊದಲು ಮಂಕಾಳ ವೈದ್ಯ ಬಣದ ಇಬ್ಬರು ಹಾಗೂ ಹೆಬ್ಬಾರ್ ಬಣದ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಸ್ಥಾನಗಳಿಗೆ ನಡೆದ ಸ್ಪರ್ಧೆಗೆ ಈಗ ಫಲಿತಾಂಶ ಹೊರಬಿದ್ದಿದೆ.

ಇದು ಇಂದಿನ ಫಲಿತಾಂಶ..!
ಕುಮಟಾ: ರಾಜಗೋಪಾಲ ಅಡಿ 9 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಗಜಾನನ ಪೈ ಅವರಿಗೆ ಯಾವುದೇ ಮತ ಬಿದ್ದಿಲ್ಲ.

ಹಳಿಯಾಳ
ಎಸ್. ಎಲ್. ಘೋಟ್ನೇಕರ್ 9 ಮತ ಪಡೆದು ಜಯ ಗಳಿಸಿದ್ದು, ಸುಭಾಷ್ ಕೊರ್ವೇಕರ್ ಅವರಿಗೆ 4 ಮತ ಮಾತ್ರ ಸಿಕ್ಕಿವೆ.

ಜೋಯಿಡಾ
ಕೃಷ್ಣ ದೇಸಾಯಿ 5 ಮತ ಪಡೆದು ಗೆದ್ದಿದ್ದು, ಪುರುಷೋತ್ತಮ ಕಾಮತ್ 4 ಮತ ಪಡೆದು ಸೋತಿದ್ದಾರೆ.

ಮುಂಡಗೋಡ
ಎಚ್. ಎಮ್. ನಾಯ್ಕ 8 ಮತಗಳಿಂದ ಗೆಲುವು ಸಾಧಿಸಿದ್ದು, ಎಲ್. ಟಿ. ಪಾಟೀಲ್ ಅವರಿಗೆ 5 ಮತ ಸಿಕ್ಕಿವೆ.

ಉಳಿದ ಕ್ಷೇತ್ರಗಳ ಫಲಿತಾಂಶ ನ್ಯಾಯಾಲಯದ ತೀರ್ಪಿನ ನಂತರ ಪ್ರಕಟವಾಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ; ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

error: Content is protected !!