Gold Price Today : ಆಭರಣ ಖರೀದಿಸಲು ಯೋಜಿಸುತ್ತಿರುವವರಿಗೆ ಮತ್ತೆ ಶಾಕ್‌ ನೀಡಿದೆ ಚಿನ್ನದ ಬೆಲೆ. ಇತ್ತೀಚೆಗೆ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಪ್ರತಿಕೂಲ ಸನ್ನಿವೇಶಗಳು, ಇರಾನ್-ಇಸ್ರೇಲ್ ಯುದ್ಧ ಮತ್ತು ವ್ಯಾಪಾರ ಅನಿಶ್ಚಿತತೆಗಳಂತಹ ಕಾರಣಗಳಿಂದ ಚಿನ್ನದ ದರಗಳು ಮತ್ತೆ ಹೆಚ್ಚುತ್ತಿವೆ.

ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿದ್ದು, ಚಿನ್ನದ ದರಗಳು ಕ್ರಮೇಣ ಹೆಚ್ಚುತ್ತಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ತೊಲ (10 ಗ್ರಾಂ) ಚಿನ್ನದ ದರ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮಟ್ಟದಲ್ಲೇ ವಹಿವಾಟು ನಡೆಸುತ್ತಿದೆ. ಕಳೆದ ಮಂಗಳವಾರ ಚಿನ್ನದ ಬೆಲೆ ಇಳಿಕೆಯಾಗಿತ್ತಾದರೂ, 10 ಗ್ರಾಂ ಬಂಗಾರದ ಬೆಲೆ ₹1 ಲಕ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲೇ ಇತ್ತು.

ಇದೀಗ ಮತ್ತೆ ದರ ಏರಿಕೆಯಾಗಿರುವುದು ಚಿನ್ನ ಖರೀದಿಸುವವರಿಗೆ ಹೆಚ್ಚುವರಿ ಹೊರೆಯಾಗಿದೆ. ಜೂನ್ 19 ರಂದು ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಮತ್ತೆ ಹೆಚ್ಚಿದ ಚಿನ್ನದ ದರ
ಬೆಂಗಳೂರಲ್ಲಿ ಚಿನ್ನದ ದರಗಳು ಕಳೆದ ಎರಡು ದಿನಗಳಲ್ಲಿ ಪ್ರತಿ ತೊಲಕ್ಕೆ ಸುಮಾರು ರೂ.1300 ಇಳಿದು ಸಮಾಧಾನ ತಂದಿದ್ದವು. ಆದರೆ, ನಿನ್ನೆ ಬುಧವಾರ ಬಂಗಾರದ ಬೆಲೆ ಮತ್ತೆ ಹೆಚ್ಚಾಗಿದೆ.

ಮಂಗಳವಾರದ ಬೆಲೆಗೆ ಹೋಲಿಸಿದರೆ, ನಿನ್ನೆ ಬುಧವಾರ 24 ಕ್ಯಾರೆಟ್ ಒಂದು ತೊಲ ಚಿನ್ನದ ದರ ರೂ.540 ಹೆಚ್ಚಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ದರ ₹1,00,910 ಮಟ್ಟಕ್ಕೆ ತಲುಪಿದೆ. ಇನ್ನು, 22 ಕ್ಯಾರೆಟ್ ಆಭರಣ ಚಿನ್ನದ ದರ ಪ್ರತಿ 10 ಗ್ರಾಂ ಗೆ ₹500 ಹೆಚ್ಚಾಗಿದೆ. ಇದರೊಂದಿಗೆ 10 ಗ್ರಾಂ ಆಭರಣ ಚಿನ್ನದ ದರ ₹92,500 ಕ್ಕೆ ತಲುಪಿದೆ.

ಮತ್ತೆ ಹೆಚ್ಚಿದ ಬೆಳ್ಳಿ ದರ
ಚಿನ್ನಕ್ಕೆ ಪೈಪೋಟಿ ನೀಡುವಂತೆ ಬೆಳ್ಳಿ ದರವೂ ಏರಿಕೆ ಕಾಣುತ್ತಿದೆ. ಪ್ರತಿದಿನವೂ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದೆ. ಇಂದು ಪ್ರತಿ ಕೆಜಿ ಬೆಳ್ಳಿ ದರ ಮತ್ತೆ ರೂ.1000 ಹೆಚ್ಚಾಗಿದೆ. ಇದರೊಂದಿಗೆ ಬೆಂಗಳೂರಲ್ಲಿ ಒಂದು ಕೆಜಿ ಬೆಳ್ಳಿ ದರ ₹1,11 ಲಕ್ಷ ತಲುಪಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಮತ್ತೆ ದಾಖಲೆ ಗರಿಷ್ಠ ಮಟ್ಟದತ್ತ ಸಾಗುತ್ತಿವೆ. ಇಂದು ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ $3377 ಡಾಲರ್‌ಗಿಂತ ಹೆಚ್ಚಿಗೆ ವಹಿವಾಟು ನಡೆಸುತ್ತಿದೆ. ಇನ್ನು, ಸ್ಪಾಟ್ ಸಿಲ್ವರ್ ದರ ಪ್ರತಿ ಔನ್ಸ್‌ಗೆ $36.69 ಡಾಲರ್‌ನಲ್ಲಿ ಮುಂದುವರಿದಿದೆ. ಮತ್ತೊಂದೆಡೆ, ನಮ್ಮ ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯವು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂ. 86.550 ಕ್ಕೆ ಮಾರಾಟವಾಗುತ್ತಿದೆ.

 

error: Content is protected !!