ಗೋವಾ; ನೈಟ್ ಕ್ಲಬ್ ನಲ್ಲಿ ಬೆಂಕಿ ಅವಘಡ, 23 ಮಂದಿ ಸಾವು..!

GOA FIRE ACCIDENT;
ಪಣಜಿ (ಗೋವಾ): ಉತ್ತರ ಗೋವಾದ ನೈಟ್‌ಕ್ಲಬ್‌ನಲ್ಲಿ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಪ್ರವಾಸಿಗರು ಸೇರಿ 23 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್​ ಬೈ ರೋಮಿಯೋ ಲೇನ್ ಕ್ಲಬ್​ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಕ್ಲಬ್‌ ಸಂಪೂರ್ಣ ಬೆಂಕಿ ಹೊತ್ತಿ ಉರಿದಿದೆ.

ಗೋವಾ ಪೊಲೀಸರ ಹೇಳಿಕೆ ಪ್ರಕಾರ, ಉತ್ತರ ಗೋವಾದ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 25 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ನಾಲ್ವರು ಪ್ರವಾಸಿಗರು, 14 ಮಂದಿ ಸಿಬ್ಬಂದಿ ಸೇರಿದ್ದು, ಏಳು ಜನರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಲ್ಲದೆ, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯಿಂದ ತನಿಖೆ ಪ್ರಗತಿಯಲ್ಲಿದೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನೈಟ್‌ಕ್ಲಬ್ ಅಗ್ನಿಶಾಮಕ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಕೆಲಸಗಾರರಾಗಿದ್ದು, ಮೂವರು ಮಹಿಳೆಯರು ಸೇರಿದ್ದಾರೆ. ಅಲ್ಲದೆ, ಪ್ರವಾಸಿಗರು ಕೂಡ ಇದ್ದಾರೆ ಎಂದು ಹೇಳಿದ್ದಾರೆ.

ಆರಂಭಿಕ ಮಾಹಿತಿಯ ಪ್ರಕಾರ, ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಕ್ಲಬ್ ಮ್ಯಾನೇಜ್​ಮೇಂಟ್​​ ಹಾಗೂ ಸುರಕ್ಷತಾ ಮಾನದಂಡ ಪಾಲಿಸದಿದ್ದರೂ ಕಾರ್ಯನಿರ್ವಹಣೆಗೆ ಅನುಮತಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದ ಪ್ರವಾಸಿ ಋತುವಿನ ಪ್ರಮುಖ ಸಂದರ್ಭದಲ್ಲಿಯೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ನಾವು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು.

ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಗೋವಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ ಶವಗಳನ್ನು ಹೊರತೆಗೆದು ಬಂಬೋಲಿಮ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಬಿಜೆಪಿ ಶಾಸಕ ಮೈಕೆಲ್ ಲೋಬೊ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದವು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಲ್ಲಾ ಕ್ಲಬ್‌ಗಳ ಅಗ್ನಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಲೋಬೊ ಹೇಳಿದರು.

 

ಪ್ರಮುಖ ಸುದ್ದಿ ಮುಂಡಗೋಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭಾರೀ ಬೆಂಕಿ ಅನಾಹುತ, ಸುಟ್ಟು ಕರಕಲಾಯ್ತು ಪರ್ನಿಚರ್ ಅಡ್ಡೆ..! ಲಕ್ಷಾಂತರ ಬೆಲೆಯ ಪರ್ನಿಚರ್ ಗಳು ಬೆಂಕಿಗಾಹುತಿ..!

error: Content is protected !!