ಕಾರವಾರ; ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪ.ಜಾತಿ ಉಪ ಹಂಚಿಕೆ ಮತು ಗಿರಿಜನ ಉಪ ಹಂಚಿಕೆ ಯೋಜನೆಯಡಿ ಎಲ್ಲಾ ಇಲಾಖೆಗಳಿಗೆ ನಿಗಧಿಪಡಿಸಿರುವ ಗುರಿಯನ್ನು ಶೇ.100 ರಷ್ಟು ಸಾಧನೆ ಮಾಡುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಪ.ಜಾತಿ ಉಪ ಹಂಚಿಕೆ ಮತು ಗಿರಿಜನ ಉಪ ಹಂಚಿಕೆ ಯೋಜನೆಯ ಪ್ರಗತಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ.ಜಾತಿ ಉಪ ಹಂಚಿಕೆ ಮತು ಗಿರಿಜನ ಉಪ ಹಂಚಿಕೆ ಯೋಜನೆಯಡಿ ಪ್ರತಿಯೊಂದು ಇಲಾಖೆಗಳಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತದವರೆಗೆ ಹಲವು ಇಲಾಖೆಗಳಲ್ಲಿ ಭೌತಿಕ ಗುರಿ ಸಾಧನೆ ಮಾತ್ರ ಆಗಿದ್ದು, ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದಿರುವುದನ್ನು ಗಮನಿಸಲಾಗಿದ್ದು, ಎಲ್ಲಾ ಇಲಾಖೆಗಳು ಭೌತಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಶೇ.100 ಸಾಧನೆ ಮಾಡಬೇಕು ಎಂದರು.
ಫೆೆಬ್ರವರಿ ಅಂತ್ಯದೊಳಗೆ ಎಲ್ಲಾ ಇಲಾಖೆಗಳಿಗೆ ತಮಗೆ ನೀಡಿರುವ ಗುರಿಯನ್ನು ಸಾಧಿಸಿ, ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು, ನಿಗಧಿತ ಗುರಿ ಸಾಧಿಸುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
