BJP News: ಮಂಗಳೂರು: ಬಿಜೆಪಿ (BJP) ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣಕುಮಾರ ಪುತ್ತಿಲ (Arun Kumar Puthila) ವಿರುದ್ಧ ಗಡೀಪಾರು ನೋಟಿಸ್ (Deportation Notice) ನೀಡಲಾಗಿದೆ.
ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ನೀಡಿದ್ದು, ಜೂನ್ ೬ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಪೊಲೀಸರು ಮತ್ತು ಗೃಹ ಇಲಾಖೆಯ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಗೃಹ ಸಚಿವ ಡಾ. ಜಿ ಪರಮೇಶ್ವರ ಹಾಗೂ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಬದಲಾವಣೆಗೆ ಆಗ್ರಹಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕರ್ನಾಟಕ ಪೊಲೀಸು ಅಧಿನಿಯಮ, 1963 ಕಲಂ: 58 ರಡಿ ಗಡೀಪಾರು ನೋಟೀಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ👉ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು..!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕೃಷ್ಣಯ್ಯ ಎಂಬವರ ಮಗ ಅರುಣಕುಮಾರ ಪುತ್ತಿಲ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 55 ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಯನ್ನು ದಿನಾಂಕ: 06-06-2025 ರಂದು ನಿಗದಿಪಡಿಸಲಾಗಿದೆ.
ಸದ್ರಿ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ನೀಡಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
‘ಈ ಪ್ರಕರಣದಲ್ಲಿ ನೀವು (ಪುತ್ತಿಲ) ಸ್ವತಃ ಅಥವಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ತಿಳಿಸಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಹ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ👉ಸ್ಥಿರಗೊಂಡಿದ್ದ ಚಿನ್ನದ ಬೆಲೆ ದಿಢೀರ್ ಜಿಗಿತ : ಸೋಮವಾರ 10 ಗ್ರಾಂ ಬಂಗಾರದ ಬೆಲೆ ₹330 ಏರಿಕೆ..!
ಆದರೆ, ಅರುಣ ಪುತ್ತಿಲ ಅವರಿಗೆ ಯಾವ ಕಾರಣಕ್ಕೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂಬುದನ್ನು ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ನೋಟಿಸ್ನಲ್ಲಿ ಉಲ್ಲೇಖಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡುವವರ ಹಾಗೂ ಕೋಮು ಪ್ರಚೋದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಿಂದು ಮುಖಂಡರ ವಿರುದ್ಧ ಕ್ರಮ ಆರಂಭವಾಗಿದೆ.