ಯಲ್ಲಾಪುರದಲ್ಲಿ ಸರಣಿ ಮನೆ ಕಳ್ಳತನ..! ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಖದೀಮರ ಕೈಚಳಕ..! ಈ ಕ್ಷಣಕ್ಕೂ ಪೊಲೀಸರ “ದಿವ್ಯ ಮೌನ”..? ಅಯ್ಯೋ ಏನಿದೇಲ್ಲ..?

Yellapur Police News; ಯಲ್ಲಾಪುರದಲ್ಲಿ ಗುರುವಾರ ಸರಣೀ ಕಳ್ಳತನವಾಗಿದೆ‌. ಪಟ್ಟಣದ ಹೃದಯ ಭಾಗದಲ್ಲೇ, ಅದೂ‌ ಕೂಡ ಯಲ್ಲಾಪುರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಇರೊ, ತಿಲಕ್ ಚೌಕಿನಲ್ಲಿ ಬರೋಬ್ಬರಿ ಐದು ಮನೆಗಳ ಕಳ್ಳತನ ಮಾಡಿದ್ದಾರೆ ಖದೀಮರು. ದುರಂತ ಅಂದ್ರೆ, ಘಟನೆ ನಡೆದು ಎರಡು ದಿನ ಆಗ್ತಾ ಬಂದ್ರೂ ಇಲ್ಲಿನ ಪೊಲೀಸರು ಮಾತ್ರ “ತುಟಿ ಪಿಟಕ್” ಅನ್ನದೇ ಮೌನಕ್ಕೆ ಶರಣಾಗಿದ್ದಾರೆ. ಬಿಟ್ರೆ, ಈ ಕ್ಷಣಕ್ಕೂ ಜಸ್ಟ್ ಏನಂದ್ರೇ ಏನೂ ಮಾಡಿಲ್ಲ, ಅನ್ನೋದು ಜನರಿಗೆ ಅರ್ಥವಾಗದ ಪ್ರಶ್ನೆ..!

ಎರಡು ದಿನಾ ಆಯ್ತು ಕಣ್ರಿ..!
ಅಸಲು, ಘಟನೆ ನಡೆದಿದ್ದು ಕಳೆದ ಗುರುವಾರ ರಾತ್ರಿ, ಶುಕ್ರವಾರ ಬೆಳಗಿನ ಜಾವದಲ್ಲಿ, ಲಕ್ಷಾಂತರ ಮೌಲ್ಯದ ಚಿನ್ನದ ಒಡವೆ ಸೇರಿದಂತೆ ಸಂಪತ್ತುಗಳು ಕಳ್ಳರ ಪಾಲಾಗಿದೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಇಷ್ಟಾದ್ರೂ, ಯಲ್ಲಾಪುರದ “ಧೀ”ಮಂತ ಪೊಲೀಸರು ಈ ಕ್ಷಣಕ್ಕೂ ಒಂದು ಕೇಸು ದಾಖಲಿಸಿಕೊಂಡಿಲ್ಲ, ಈ ಬಗ್ಗೆ ತುಟಿ ಬಿಚ್ಚಿಲ್ಲವಲ್ಲ ಯಾಕೆ..? ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅದು ಠಾಣೆಯ ಕೂಗಳತೆ ದೂರ..!
ಅಂದಹಾಗೆ, ಯಲ್ಲಾಪುರದ ತಿಲಕ್ ಚೌಕಿನಲ್ಲಿರೋ ಬೀಡಿಕರ್‌ ರವರ ಮನೆ , ಪ್ರಸನ್ನ ಗುಡಿಗಾರ್, ಗಜಾನನ್ ನಾಯ್ಕ್, ದಿ. ಮಂಗೇಶ್ ಕೈಸರೆ ಸೇರಿ ಐವರ ಮನೆಯಲ್ಲಿ ಕಳ್ಳತನವಾಗಿದೆ ಅನ್ನೋ ಮಾಹಿತಿ ಇದೆ. ಇಲ್ಲಿ ಏನಿಲ್ಲವೆಂದರೂ ಲಕ್ಷ ಲಕ್ಷ ಬೆಲೆಯ ಬಂಗಾರ ಕದ್ದಿದ್ದಾರೆ ಖದೀಮರು. ಆದ್ರೆ, ಘಟನೆ ನಡೆದು ಎರಡು ದಿನ ಕಳೆಯುತ್ತ ಬಂದಿದೆ. ಈ ಕ್ಷಣಕ್ಕೂ FIR ದಾಖಲಾಗಿಲ್ಲವಂತೆ, ಅದೂ ಹೋಗಲಿ, ಇಂತಹದ್ದೊಂದು ಸರಣೀ ಕಳ್ಳತನವಾದ್ರೂ ಇಲ್ಲಿವರೆಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಹೊರತು ಪಡಿಸಿದ್ರೆ ಇನ್ನುಳಿದಂತೆ ಹಿರಿಯ ಅಧಿಕಾರಿಗಳು ಈ ಕಡೆ ಕಣ್ಣೆತ್ತಿಯೂ ನೋಡಿಲ್ಲ ಅನ್ನೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ವಾ..?
ಅಸಲಿಗೆ, ಇಲ್ಲಿ ಹಿರಿಯ ಅಧಿಕಾರಿಗಳಿಗೆ ಈ ಸರಣೀ ಕಳ್ಳತನದ ಘಟನೆ ಗೊತ್ತೇ ಇಲ್ಲವಾ..? ಅಥವಾ ಅವ್ರಿಗೇಲ್ಲ ಗೊತ್ತಾಗದಂತೆ ಏನಾದ್ರೂ ಮ್ಯಾನೇಜ್ ಮಾಡಲಾಯ್ತಾ..? ಅಥವಾ ಗೊತ್ತಿದ್ದೂ ಅದರ ಗೊಡವೆ ನಮಗ್ಯಾಕೆ ಬಿಡ್ರಿ ಅಂತಾ “ಹಿರಿಕರು” ಬೆಪ್ಪಗೆ ಕುಳಿತ್ರಾ..? ಅರ್ಥವೇ ಅಗ್ತಿಲ್ಲ. ಹಾಗಂತ, ಯಲ್ಲಾಪುರದ ಮಂದಿ ಆತಂಕಗೊಂಡಿದ್ದಾರೆ‌.

ಹಳಿಯಾಳದಲ್ಲಿ ಬುಧವಾರ ಕಳ್ಳತನ..!
ನಿಜ ಅಂದ್ರೆ, ಇದೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಬುಧವಾರ, ಅಂದ್ರೆ ದಿನಾಂಕ 16 ರಂದು ಸರಣೀ ಕಳ್ಳತನವಾಗಿರತ್ತೆ. ವಿಚಿತ್ರವೆಂದ್ರೆ, ಅದಾದ ಮಾರನೇ ದಿನವೇ ಅಂದ್ರೆ, ಗುರುವಾರ ದಿನಾಂಕ 17 ರಂದು ಯಲ್ಲಾಪುರದಲ್ಲಿ ಐದು ಮನೆಗಳಿಗೆ ಖನ್ನ ಹಾಕಲಾಗಿದೆ. ಇಲ್ಲಿ ಬಹುತೇಕ ಒಂದೇ ಗ್ಯಾಂಗ್ ಇಂತಹದ್ದೊಂದು ಸರಣಿ ಕಳ್ಳತನ ನಡೆಸಿದೆ ಅನ್ನೋ ಅನುಮಾನ ಇದೆ.

Yellapur Police News;

ಆದ್ರೆ, ಯಲ್ಲಾಪುರದ ಪೊಲೀಸರಿಗೆ ಅದ್ಯಾಕೋ ಏನೋ ಇದೇಲ್ಲ ಏನಂದ್ರೆ ಏನೂ ಅಲ್ಲವೆಂಬಂತಾಗಿದೆ. ಇಲ್ಲಿನ ಠಾಣೆಯ ಅಂಗಳದಲ್ಲಿ ಪೊಲೀಸಿಂಗ್ ಅನ್ನೋದು “ಮಟ ಮಟ” ಮದ್ಯಾನದಂತಾಗಿದೆ. ಹಾಗಂತ ನಾವು ಹೇಳ್ತಿಲ್ಲ, ಯಲ್ಲಾಪುರದ ಪ್ರಜ್ಞಾವಂತರು ಒಳಗೊಳಗೇ ಆತಂಕಗೊಂಡಿದ್ದಾರೆ.

ಡಿವೈಎಸ್ಪಿ ಮೇಡಮ್ಮಿಗೂ ಗೊತ್ತಿಲ್ವಾ..?
ಅಸಲು, ನಮ್ಮ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮೇಡಮ್ಮಿಗೂ ಈ ಸರಣೀ ಕಳ್ಳತನದ ಬಗ್ಗೆ ಮಾಹಿತಿ ಹೋಗಿಲ್ವಾ..? ನಿಜಕ್ಕೂ ಅರ್ಥ ಆಗಿಲ್ಲ. ಒಂದು ವೇಳೆ ಅವ್ರಿಗೆ ಘಟನೆಯ ಮಾಹಿತಿ ಇದ್ರೆ, ಸ್ಥಳಕ್ಕೆ ಭೇಟಿ ನೀಡಿದ್ರಾ..? ಅಥವಾ ಇಲ್ಲವಾ..? ನಮಗಂತೂ ಈ‌ ಕ್ಷಣಕ್ಕೂ ಗೊತ್ತಾಗಿಲ್ಲ..!

ನೂತನ ಎಸ್ಪಿ ಸಾಹೇಬ್ರೇ ಗಮನಿಸಿ..!
ವಿಪರ್ಯಾಸ ಅಂದ್ರೆ, ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ದೀಪನ್ ಎಂ.ಎನ್ ಬಂದಿಳಿದಿದ್ದಾರೆ‌. ಅವ್ರು ಬಂದಿಳಿದ ಕೆಲವೇ ಗಂಟೆಗಳಲ್ಲಿ ಜಿಲ್ಲೆಯ ಎರಡೆರಡು ಕಡೆ ಸರಣಿ ಕಳ್ಳತನವಾಗಿದೆ. ಆದ್ರೂ ಕೂಡ ಬಹುಶಃ ಎಸ್ಪಿ ಸಾಹೇಬರ ಗಮನಕ್ಕೆ ಇದೇಲ್ಲ ಬಂದಂಗೆ ಕಾಣ್ತಿಲ್ಲ. ಬಂದಿದ್ದಿದ್ರೆ ಕನಿಷ್ಟ ಪಕ್ಷ ಅವರಾದ್ರೂ ಒಮ್ಮೆ ಬಂದು “ಏನಾಯ್ತರಪ್ಪ..?” ಅಂತಾ ಕೇಳಿಕೊಂಡಾದ್ರೂ ಹೋಗ್ತಿದ್ರೇ‌ನೋ..? ಮನೆಯಲ್ಲೇ ಬೆಚ್ಚಗೆ ಕುಳಿತು ರಾಜ್ಯಭಾರ ಮಾಡುವ ಕೆಲ “ಉಂಡುಬುರುಕ” ಅಧಿಕಾರಿಗಳಿಗೆ ಕಿವಿ ಹಿಂಡ್ತಿದ್ರೆನೊ..! ಬಹುಶಃ ಬಚಾವಾಗಿದ್ದಾರೆ.

ಅದು ಹೊರರಾಜ್ಯದ ಗ್ಯಾಂಗ್..?
ಅಸಲು, ಜುಲೈ 16 ರಂದು ಹಳಿಯಾಳದಲ್ಲಿ ಸರಣೀ ಕಳ್ಳತನ ಮಾಡಿರೋ ಖದೀಮರು, ಮಾರನೇ ದಿನವೇ ಯಲ್ಲಾಪುರದಲ್ಲಿ ಕೈ ಚಳಕ ತೋರಿದ್ದಾರೆ. ಇದನ್ನೇಲ್ಲ ಗಮನಿಸಿದ್ರೆ, ಇದೊಂದು ಖತರ್ನಾಕ ಕಳ್ಳರ ಗ್ಯಾಂಗ್ ಕೃತ್ಯವಾ..? ಅನ್ನೊ ಅನುಮಾನವಿದೆ. ಬಹುಶಃ ಆ ಗ್ಯಾಂಗ್ ಜಿಲ್ಲೆಯಲ್ಲಿ ಇನ್ನೂ ಕೃತ್ಯ ನಡೆಸುವ ಹುನ್ನಾರದಲ್ಲಿದೆ ಅನ್ನೋ ಅನುಮಾನವಿದೆ. ಯಾಕಂದ್ರೆ, ಎರಡೇ ದಿನದಲ್ಲಿ, ಎರಡು ತಾಲೂಕಿನಲ್ಲಿ ಇಂತಹ ಕೃತ್ಯ ನಡೆಸಿದ್ದಾರೆ ಅಂದ್ರೆ ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಲೇ ಬೇಕು ಅಲ್ವಾ..?

ಪೊಲೀಸರೇ ಎಚ್ಚೆತ್ತುಕೊಳ್ಳಿ..! ಇದು ಇಡೀ ಜಿಲ್ಲೆಯ ಜನರ ಕೂಗು..!

error: Content is protected !!