ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನವದಂಪತಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಾರ್ತಿಕ್ ಹೂಗಾರ (34) ಮತ್ತು ಐಶ್ವರ್ಯ ಹೂಗಾರ (30) ಮೃತ ದಂಪತಿ. 15 ದಿನಗಳ ಹಿಂದೆಯಷ್ಟೇ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ದೇವರ ದರ್ಶನ ಪಡೆದು ಬರುವಾಗ ದುರಂತ ಸಂಭವಿಸಿದೆ, ಕಾರ್ತಿಕ್ ಅವರು ಪತ್ನಿ ಮತ್ತು ಸಂಬಂಧಿಕರ ಜೊತೆ ಗದಗ ಜಿಲ್ಲೆಯ ನವಲಗುಂದ ಕಾಮಣ್ಣನ ದರ್ಶನಕ್ಕೆ ಹೋಗಿದ್ದರು. ಕಾಮಣ್ಣನ ದರ್ಶನ ಪಡೆದು ಹಾವೇರಿಗೆ ಆಗಮಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ವಿಚಿತ್ರ ಅಂದರೆ ಐಶ್ವರ್ಯ ಅವರ ಗ್ರಾಮ ನೀರಲಗಿ ಕ್ರಾಸ್ ಬಳಿಯೇ ಅಪಘಾತ ಸಂಭವಿಸಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಿಗ್ಗಾವಿ ತಾಲೂಕಾಸ್ಪತ್ರೆಗೆ ತರಲಾಗಿದೆ. ಮೃತರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು. ಹಾವೇರಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರಿನಿಂದ ಮೃತದೇಹಗಳನ್ನು ಹೊರತೆಗೆದರು. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತಡಸ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.
ವರದಿಗಾರ ದಿವಂಗತ ಗಂಗಾಧರ ಹೂಗಾರ ಅವರ ಇಬ್ಬರು ಪುತ್ರರಾದ ಕಾರ್ತಿಕ್ ಮತ್ತು ಕರ್ಣ ಅವರಿಗೆ ಫೆ.14ರಂದು ಮದುವೆಯಾಗಿತ್ತು. ವಿವಾಹದ ಬಳಿಕ ಕರ್ಣ ಮತ್ತು ಅವರ ಪತ್ನಿ ಪ್ರವಾಸಕ್ಕೆ ತೆರಳಿದ್ದರು. ಕಾರ್ತಿಕ್ ತಮ್ಮ ಪತ್ನಿ ಮತ್ತು ಸಂಬಂಧಿಕರೊಂದಿಗೆ ದೇವರ ದರ್ಶನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.