ಶಿರಹಟ್ಟಿ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ..! ಗುತ್ತಿಗೆದಾರನಿಂದ 5 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿ..!!

ಗುತ್ತಿಗೆದಾರನಿಂದ ಕಮಿಷನ್ ಹಣ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ನಾ ಕಾವೂಂಗಾ, ನಾ ಕಾನೇ ದೂಂಗಾ ಅಂತ ಜಪ ಮಾಡುವ ಬಿಜೆಪಿಗೆ ಭಾರೀ ಮುಜುಗರ ತಂದಿಟ್ಟಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಗುತ್ತಿಗೆದಾರರನಿಂದ 5 ಲಕ್ಷ ರೂಪಾಯಿ ಕಮಿಷನ್ ಹಣ ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎ ಗಳಾದ ಮಂಜುನಾಥ್ ಹಾಗೂ ಗುರು ಎಂಬುವ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಖಾಸಗಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನದ ಆಸ್ಪತ್ರೆಯಾಗಿದೆ. ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡಾ ಆಗಿದ್ದಾರೆ. ಈಗ ಕಮಿಷನ್ ಹಣಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.