ಸಿದ್ದಾಪುರದ ಗೀತಾಳನ್ನು ಕೊಂದ ಹಂತಕನಿಗೆ ಶಿಕ್ಷೆ  ಪ್ರಕಟ..!

ಸಿದ್ಧಾಪುರದ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಗೀತಾ ಪ್ರಭಾಕರ ಹುಂಡೇಕರ ಕೊಲೆ ಆರೋಪಿತನಾದ ಅಭಿಜಿತ ಗಣಪತಿ ಮಡಿವಾಳ ಇವರ ಮೇಲಿನ ಆಪಾದನೆಯು ರುಜುವಾತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.32,000 ದಂಡ, ಮೃತಳ ಅವಲಂಬಿತರಾದ ಮಕ್ಕಳಿಗೆ ರೂ.50,000 ಪರಿಹಾರ ನೀಡುವಂತೆ ಮತ್ತು ಮೃತಳ ಅವಲಂಬಿತರಾದ ಮಕ್ಕಳು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನಲೆ:- ಗೀತಾ ಪ್ರಭಾಕರ ಹುಂಡೇಕರ ಇವರು ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಸೊರಬ ರಸ್ತೆಯಲ್ಲಿರುವ ಬಸವನಗಲ್ಲಿ ವಾರ್ಡ ನಂ.9 ರಲ್ಲಿ ಬರುವ ಮನೆ ನಂ.56 ರಲ್ಲಿ ಒಬ್ಬರೇ ವಾಸವಾಗಿದ್ದು, ಸದ್ರಿಯವರು ಸಿದ್ದಾಪುರದ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ ಸೊಸೈಟಿಯಲ್ಲಿ ಪಿಗ್ನಿ ಕಲೆಕ್ಟರ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ಸಿದ್ದಾಪುರ ಶಹರದಲ್ಲಿ ಕಾಲ್ನಡಿಗೆಯಿಂದ ಪಿಗ್ಮಿ ಹಣವನ್ನು ಸಂಗ್ರಹ ಮಾಡುತ್ತಿದ್ದರು. ಹೀಗಿರುವಾಗ ಅಭಿಜಿತ ಗಣಪತಿ ಮಡಿವಾಳ ಆರೋಪಿತನು , ಇವಳ ಬಳಿ ಪಿಗ್ಮಿಯಿಂದ ಸಂಗ್ರಹಿಸಿದ ಹಣ ಇರುತ್ತದೆ ಮತ್ತು ಮನೆಯಲ್ಲಿ ಒಬ್ಬಳೇ ವಾಸವಾಗಿರುವ ವಿಷಯವನ್ನು ತಿಳಿದುಕೊಂಡು ಸದ್ರಿಯವಳಿಗೆ ಕೊಲೆ ಮಾಡಿ ಪಿಗ್ಮಿ ಹಣವನ್ನು ಕಳ್ಳತನ ಮಾಡುವ ಸಲುವಾಗಿ ದಿ:23-12-2024 ರಂದು ರಾತ್ರಿ 10.15 ಗಂಟೆಯ ಸುಮಾರಿಗೆ ಇವರ ಮನೆಯ ಹಿಂಭಾಗದ ಮೇಲಿನ ಹಂಚನ್ನು ತೆಗೆದು ಬಚ್ಚಲು ಮನೆಯ ಬಳಿ ಇಳಿದು ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ , ಕೊಲೆ ಮಾಡುವ ಉದ್ದೇಶದಿಂದ ಬಲಗೈಯಿಂದ ಕುತ್ತಿಗೆಯನ್ನು ಬಲವಾಗಿ ಹಿಸುಕಿ, ಕುತ್ತಿಗೆಯ ಭಾಗದಲ್ಲಿ ಗಾಯನೋವು ಪಡಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತಳು ಕಿವಿಯಲ್ಲಿ ಧರಿಸಿದ್ದ ಹರುಳುಗಳುಳ್ಳ ಬಂಗಾರದ ಕಿವಿಯೊಲೆ ಒಂದು ಜೊತೆ, ಬಂಗಾರದ ನಮೂನೆಯ ರೊಲ್ಡ್ ಗೊಲ್ಡ್ ಬಳೆಗಳು-2 ಮತ್ತು ಪಿಗ್ಮಿ ಯಿಂದ ಸಂಗ್ರಹಿಸಿದ ಒಟ್ಟೂ ಮೊತ್ತ 21,680 ರೂ ಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋದ ಅಪರಾಧದ ಬಗ್ಗೆ ಆರೋಪಿತರ ವಿರುದ್ಧ ದೋಷಾರೋಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.

ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜೆ.ಬಿ ಸೀತಾರಾಮ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಎ.ಎಸ್.ಐ ಗಣಪತಿ ಭಂಟ್ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಜಿತ ಪ್ರಕರಣದಲ್ಲಿ ಹಾಜರು ಪಡಿಸಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷö್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.