ಕಾರವಾರ; ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯವಾಗಿ ಶೇ..100 ರಷ್ಟು ನೋಂದಣಿ ಮಾಡಲು ಕ್ರಮವಹಿಸುವಂತೆ ಜಿಲ್ಲೆಯ ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಗ್ರಾಮ ಪಂಚಾಯತ್ ಗಳು ಮತ್ತು ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಭವಿವಿಸುವ ಪ್ರತಿಯಿಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯ ನೋಂದಣಿ ಮಾಡಬೇಕಿದ್ದು, ಈ ಬಗ್ಗೆ ಪ್ರತೀ ತಿಂಗಳು ತಹಶೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ, ಪರಿಶೀಲನೆ ನಡೆಸುವಂತೆ ತಿಳಿಸಿದ ಅವರು, ಜನನ ಮರಣ ನೋಂದಣಿ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಹಾಗೂ ಸ್ವಚ್ಛ ವಾಹಿನಿ ವಾಹನಗಳ ಮೂಲಕ ಪ್ರತಿದಿನ ಈ ಬಗ್ಗೆ ಪ್ರಚಾರ ಮಾಡುವಂತೆ ಮತ್ತು ತಮ್ಮ ವ್ಯಾಪ್ತಿಯಲ್ಲಿ ಬ್ಯಾನರ್, ಪೋಸ್ಟರ್ ಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆಯ ಮೂಲಕ ಸರ್ಕಾರಿ ಅಧೀನದ ಎಲ್ಲಾ ವೈದ್ಯಕೀಯ ಕೆಂದ್ರಗಳು ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಜನನ ಮರಣ ಘಟನೆಗಳನ್ನು ನಿಗಧಿತ ಸಮಯದಲ್ಲಿ ನೋಂದಣಿ ಮಾಡುವಂತೆ ಮತ್ತು ಇ-ಜನ್ಮ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮತ್ತು ಮರಣಗಳಿಗೆ ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳನ್ನು ಕಡ್ಡಾಯವಾಗಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು, ಮನೆಯಲ್ಲಿ ಸಂಭವಿಸುವ ಜನನಗಳನ್ನು ಪರಿಶೀಲನೆಯಿಂದ ದೃಢೀಕರಿಸಿ ನೋಂದಣಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಜನನ ಮರಣ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳು ಮತ್ತು ಇತ್ತೀಚಿನ ಬದಲಾವಣೆಗಳ ಕುರಿತಂತೆ ಎಲ್ಲಾ ನೋಂದಣಾಧಿಕಾರಿಗಳು ತಿಳಿದಿರಬೇಕು, ನಿಗಧಿತ ಅವಧಿಯ ನಂತರದ ನೋಂದಣಿಗಳನ್ನು ನ್ಯಾಯಾಲಯದ ಆದೇಶ ಪಡೆದು ಮಾಡಬೇಕು . 2024 ವರ್ಷಕ್ಕಿಂತ ಹಿಂದಿನ ಅವಧಿಯ ಜನನ ಮರಣ ದಾಖಲೆಗಳನ್ನು ಸಂರಕ್ಷಣಾಧಿಕಾರಿಗಳಿಗೆ ವರ್ಗಾಯಿಸುವಂತೆ ತಿಳಿಸಿದರು.
ನೋಂದಣಿ ದಾಖಲೆಗಳಲ್ಲಿ ದಿನಾಂಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ನಮೂದಿಸಬೇಕು, ತಾಲೂಕು ಮಟ್ಟದಲ್ಲಿ ಜನನ ಮರಣ ನೋಂದಣಿಯು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಕುರಿತಂತೆ ಪ್ರತೀ ತಿಂಗಳು ಕನಿಷ್ಠ ನೋಂದಣಿ ಘಟಕಗಳ ಪರಿಶೀಲನೆ ಕೈಗೊಳ್ಳುವಂತೆ ಹಾಗೂ ನೋಂದಣಿಯ ದಾಖಲೆಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ಕೈಗೊಂಡಿರುವ ಡಿಜಿಟಲ್ ದಾಖಲೀಕರಣ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಮಾತನಾಡಿ, ಜಿಲ್ಲೆಯಲ್ಲಿ 2025 ರಲ್ಲಿ, 17,227 ಜನನ ಮತ್ತು 11,579 ಮರಣದ ಕುರಿತು ದಾಖಲೆಗಳು ನೋಂದಣಿಯಾಗಿದ್ದು, ಜನವರಿ 2026 ರಲ್ಲಿ 1,325 ಜನನ ಮತ್ತು 1,104 ಮರಣಗಳು ದಾಖಲಾಗಿವೆ. ಈ ಕುರಿತ ದಾಖಲೆಗಳನ್ನು ಡಿಜಿಟಲ್ ಸಹಿಯೊಂದಿಗೆ ವಿತರಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟೀಲ್ ಮತ್ತು ಆನ್‌ಲೈನ್ ಮೂಲಕ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮುಖ್ಯಾಧಿಕಾರಿಗಳು ಹಾಜರಿದ್ದರು.
