KDCC ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾ ಜಿದ್ದಿನ ಹಣಾಹಣಿ ಏರ್ಪಟ್ಟು, ಅಂತಿಮವಾಗಿ ಜೊಯಿಡಾದ ಕೃಷ್ಣ ದೇಸಾಯಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿಯ KDCC ಬ್ಯಾಂಕಿನ ಚುನಾವಣೆ ಎರಡು ಘಟಾನುಘಟಿ ನಾಯಕರ ನಡುವೆ ಜಿದ್ದು ಏರ್ಪಟ್ಟಿತ್ತು. ಮಾಜಿ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ತಂಡದ ನಡುವೆ ನಡೆದ ನೇರ ಹಣಾಹಣಿಯಲ್ಲಿ ಹೆಬ್ಬಾರ್ ತಂಡ ಜಯಗಳಿಸಿತ್ತು.

16 ನಿರ್ದೇಶಕ ಸ್ಥಾನಕ್ಕಾಗಿ ನಡೆದ ಚುನಾವವಣೆಯಲ್ಲಿ ಹೆಬ್ಬಾರ್ ತಂಡದ 11 ನಿರ್ದೇಶಕರು ಆಯ್ಕೆಯಾದರೆ, ಸಚಿವರ ತಂಡದ ಕೇವಲ 5 ನಿರ್ದೇಶಕರು ಗೆದ್ದು ಈ ಅಂತರ್ಯುದ್ಧದಲ್ಲಿ ವೈದ್ಯರ ಟೀಂ ಸೋತು ಮಕಾಡೆ ಮಲಗಿತ್ತು. ಈ ಚುನಾವಣೆಯಲ್ಲಿ ಹೆಬ್ಬಾರ್ ಮತ್ತೊಮ್ಮೆ ತನ್ನ ಚುನಾವಣಾ ನೈಪುಣ್ಯತೆಯನ್ನು ತೋರಿಸಿದ್ದರು.
ಕೆಡಿಸಿಸಿ ಯ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕೆಲ ಕ್ಷೇತ್ರದ ಅಭ್ಯರ್ಥಿಗಳು ನ್ಯಾಯಾಲಯದ ಮೋರೆ ಹೋದ ಪರಿಣಾಮ ಅಂತಿಮ ಫಲಿತಾಂಶ ಹೊರಬರಲು 3 ತಿಂಗಳು ಕಾಣಬೇಕಾಯಿತು. ಈಗ ಎಲ್ಲಾ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾದ ಅಸಿಸ್ಟೆಂಟ್ ಕಮಿಷನರ್ ಶಿರಸಿಯವರು ಇಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದ್ದಾರೆ.
ನಿರೀಕ್ಷೆಯಂತೆ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಅವರು ಒಮ್ಮತದ ಅಭ್ಯರ್ಥಿಯಾಗಿ ನೂತನ ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದಾರೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕಾರವಾರದ ಪ್ರಕಾಶ ಗುನಗಿ, ಅಂಕೋಲಾದ ಬೀರಣ್ಣನಾಯಕ(ಸುಂಕೇರಿ ಬಾಬು) ಹಾಗೂ ಜೊಯಿಡಾದ ಕೃಷ್ಣದೇಸಾಯಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು.

ಅಂತಿಮವಾಗಿ ಜೊಯಿಡಾದ ಕೃಷ್ಣದೇಸಾಯಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಎರಡೂ ಘಟ್ಟದ ಮೇಲಿನ ತಾಲೂಕುಗಳಿಗೆ ಒಲಿದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಯಲ್ಲಾಪುರದ ಶಿವರಾಮ್ ಹೆಬ್ಬಾರ್’ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ರೈತರ ಜೀವಾಳ, ಮದ್ಯವರ್ತಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಲ್ಲಿ ಮಾತ್ರ ಅದರ ನೆರಳಲ್ಲಿ ರೈತರ ಪ್ರಾಥಮಿಕ ಪತ್ತಿನ ಸಂಸ್ಥೆಗಳು ಬಲಾಡ್ಯಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಆಯ್ಕೆಯಾದ ಎಲ್ಲಾ ನಿರ್ದೇಶಕರು ಕೆಡಿಸಿಸಿ ಬ್ಯಾಂಕ್ ಉನ್ನತಿಗಾಗಿ ನನ್ನೊಂದಿಗೆ ಕೈಜೋಡಿಸಿ. ಚುನಾವಣೆಗಳು ಕಾನೂನಿನ ನೈಸರ್ಗಿಕ ಪ್ರಕ್ರಿಯೆಗಳು, ಪದಾಧಿಕಾರಿಗಳ ಆಯ್ಕೆಯ ಬಳಿಕ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಕ್ತಾಯದ ಹಂತ ತಲುಪಿದೆ ಎಂದರ್ಥ. ಇನ್ನು ಮುಂದೆ ಬ್ಯಾಂಕಿನ ಎಲ್ಲಾ ನಿರ್ದೇಶಕರು ಒಟ್ಟಾಗಿ ಕೆಲಸ ಮಾಡೋಣ. ಆ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನ ಮುಗಿಲೆತ್ತರಕ್ಕೆ ಕೊಂಡೊಯ್ಯೋಣ’ ಎಂದರು.
