ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ಸಂಜೆ ನಡೆದ ಭೀಕರ ಹತ್ಯೆ ಯತ್ನ ಕೇಸಿನ ಅಸಲೀಯತ್ತು ಬಹಿರಂಗವಾಗಿದೆ. ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವನ ಹೆಸರು ಶಿವಾನಂದ ಶಿವಾನಂದ ರಾಮಣ್ಣ ಗುಡಿಯಾಳ(48), ಅಷ್ಟಕ್ಕೂ, ಹಾಗೆ ರಕ್ತದ ಮಡುವಿನಲ್ಲಿ ಬೀಳುವಂತೆ ಕತ್ತಿಗೆ ಬಲವಾಗಿ ಮಚ್ಚಿನಿಂದ ಕತ್ತಿರಿಸಿದ್ದವನ ಹೆಸರು ಶಿವರಾಜ್ ಕಲಕಟ್ಟಿ..!

ಅನುಮಾನದ ಪಿಶಾಚಿ..!
ಅಸಲು, ಮುಂಡಗೋಡ ತಾಲೂಕಿನ ತಟ್ಟಿಹಳ್ಳಿ ಗ್ರಾಮದ ಲಾರಿಚಾಲಕ ಶಿವಾನಂದ ರಾಮಣ್ಣ ಗುಡಿಯಾಳ(48) ಈ ಹಿಂದೆ ಎರಡೆರಡು ಮದುವೆಯಾಗಿದ್ದ. ಆದ್ರೆ, ಇಬ್ಬರು ಪತ್ನಿಯರು ಸಾವನ್ನಪ್ಪಿದ ನಂತರ ಕಳೆದ ಒಂದೂವರೆ ವರ್ಷದ ಹಿಂದೆ ಹಾನಗಲ್ ತಾಲೂಕು ಮಹರಾಜಪೇಟೆ ಎಂಬ ಗ್ರಾಮದ ಗಂಡ ಸತ್ತಿದ್ದ ಮಹಿಳೆ ನಾಗಮ್ಮ ಪರಸಪ್ಪ ಕಲಕಟ್ಟಿ ಎಂಬವಳನ್ನು ಮೂರನೇ ಮದುವೆಯಾಗಿದ್ದ. ಅಸಲು, ಈ ಮಹಿಳೆಗೆ ಶಿವರಾಜ ಪರಸಪ್ಪ ಕಲಕಟ್ಟಿ ಎಂಬುವ 27 ವರ್ಷದ ಮಗನಿದ್ದು ಈ ಮಗನು ಹಾನಗಲ್ ತಾಲೂಕಿನಲ್ಲಿಯೆ ವಾಸವಾಗಿದ್ದ. ನಾಗಮ್ಮ ಮಾತ್ರ ಶಿವಾನಂದನ ಜೊತೆಗೆ ತಟ್ಟಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದಳು.

ನಾಲ್ಕನೇ ಮದುವೆ ಮಾಡಿಕೊಂಡಿದ್ನಾ..?
ನಾಗಮ್ಮ ಎಂಬುವವಳನ್ನು ಮೂರನೇ ಮದುವೆ ಮಾಡಿಕೊಂಡಿದ್ದ ಶಿವಾನಂದ ಅಷ್ಟಕ್ಕೆ ಸುಮ್ಮನಾಗದೇ, ಮತ್ತೊಂದು ಮದುವೆಯಾಗಿ ಮುಂಡಗೋಡ ಪಟ್ಟಣದಲ್ಲಿ ಮನೆ ಮಾಡಿ ಇಟ್ಟಿದ್ದನು ಎನ್ನಲಾಗುತ್ತಿದೆ. ಹೀಗಾಗಿ, ಈ ವಿಷಯ ಮೂರನೇ ಹೆಂಡತಿ ನಾಗಮ್ಮನಿಗೆ ತಿಳಿದು ಒಂದಿಷ್ಟು ಸಂಘರ್ಷಕ್ಕೆ ಕಾರಣವಾಗಿತ್ತು ಅನ್ನೋ ಮಾಹಿತಿ ಇದೆ. ಹೀಗಾಗಿನೇ ನಾಗಮ್ಮ ಶಿವಾನಂದನ ಕಿರುಕುಳ ತಾಳಲಾರದೇ ನಿನ್ನೆ ಬುಧವಾರವಷ್ಟೇ ಮುಂಡಗೋಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳಂತೆ. ಈ ಕಾರಣಕ್ಕಾಗಿ ಪೊಲಿಸ್ರು ಶಿವಾನಂದನಿಗೆ ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದರೂ, ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇದರಿಂದ ಮಹಿಳೆ ಶಿವಾನಂದನ ಮೇಲೆ ಕೋಪ ನೆತ್ತಿಗೇರಿಸಿಕೊಂಡಿದ್ದಳು. ತನ್ನ ಮೊದಲನೇ ಗಂಡನ ಮಗನಿಗೆ ನಡೆದ ಅಷ್ಟೂ ಸಂಗತಿ ಹೇಳಿಕೊಂಡಿದ್ದಳು. ಹೀಗಾಗಿ, ಇಂದು ಗುರುವಾರ ಸಂಜೆ ಐದುಗಂಟೆ ಸುಮಾರಿಗೆ ಹಾನಗಲ್ ತಾಲೂಕಿನ ಮಹಾರಾಜಪೇಟೆ ಗ್ರಾಮದಿಂದ ಕಾರ್ ತೆಗೆದುಕೊಂಡು ತಟ್ಟಹಳ್ಳಿಗೆ ಬಂದ ಮಹಿಳೆಯ ಮೊದಲ ಗಂಡನ ಮಗ ಶಿವರಾಜ್, ತನ್ನ ತಾಯಿಗೆ ಯಾಕೆ ಕಿರುಕುಳ ನೀಡುತ್ತಿದ್ದಿಯಾ ಅಂತಾ ಎರಡನೆ ತಂದೆ ಶಿವಾನಂದ ಜೊತೆ ಜಗಳಕ್ಕಿಳಿದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಶಿವರಾಜ ಕತ್ತಿಯಿಂದ ಶಿವಾನಂದ ಕುತ್ತಿಗೆ ಹಾಗೂ ತಲೆಯ ಹಿಂಬಾಗ ಎದೆಗೆ ಹೊಡೆದು ತೀವ್ರ ಗಾಯಗೊಳಿಸಿ ಪರಾರಿಯಾಗಿದ್ದಾನೆ.

ಲಾರಿಯ ಮಾಲೀಕ ನೋಡಿದ..!
ನಿಜ ಅಂದ್ರೆ, ಇವತ್ತು ತಟ್ಟಿಹಳ್ಳಿಯ ಬಹುತೇಕ ಜನರು ಸಾಲಗಾಂವ ಜಾತ್ರೆಗೆ ತೆರಳಿದ್ದರು. ಈ ವೇಳೆಯಲ್ಲಿ ಲಾರಿ ಮಾಲೀಕ ತನ್ನ ಚಾಲಕ ಶಿವಾನಂದ ಮನೆಗೆ ತೆರಳಿದಾಗ ಜಗಳವಾಗಿ ಶಿವಾನಂದ ರಕ್ತದ ಮಡಿಲಿನಲ್ಲಿ ಬಿದ್ದಿದ್ದನ್ನು ನೋಡಿ ಲಾರಿಯ ಮಾಲೀಕ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ. ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಮುಂಡಗೋಡ ಪೊಲೀಸ್ರು, ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಖಾಸಗಿ ವಾಹನದ ಮೂಲಕ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿರುವ ಶಿವಾನಂದ ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದಾನೆ. ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಇನ್ನೂ ಪತ್ನಿ ನಾಗಮ್ಮ ಪೊಲೀಸ್ ಠಾಣೆಗೆ ಬಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಟ್ಟಿಹಳ್ಳಿಯಲ್ಲಿ ಮಗನಿಂದಲೇ ತಂದೆಯ ಭೀಕರ ಹತ್ಯೆಗೆ ಯತ್ನ..? ಕಂದಲಿಯಿಂದ ಕುತ್ತಿಗೆಗೆ ಕೊಯ್ದ ಶಿವರಾಜ್ ಪರಾರಿ..!
