ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ನಕಲಿ ವೈದ್ಯರನ್ನು ನೇಮಕ ಮಾಡಿಕೊಂಡಲ್ಲಿ ಅಂತಹ ಆಸ್ಪತ್ರೆಗಳ ವಿರುದ್ದ ನಿಯಮಾನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ನೊಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖಾಸಗಿ ನರ್ಸಿಂಗ್ ಹೋಂಗಳು ತಮ್ಮಲ್ಲಿ ನೇಮಕ ಮಾಡಿಕೊಳ್ಳುವ ವೈದ್ಯರ ನೈಜ ದಾಖಲೆಗಳನ್ನು ಪರಿಶೀಲಿಸದೇ ನಕಲಿ ವೈದ್ಯರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಲ್ಲಿ ಅಂತಹ ಸಂಸ್ಥೆಗಳ ವಿರುದ್ದ ಮೊದಲ ಬಾರಿಗೆ ನಿಯಮಾನುಸಾರ ದಂಢ ವಿಧಿಸುವಂತೆ ಮತ್ತು ಪುನ: ಮುಂದುವರೆದಲ್ಲಿ ದಂಡ ಮತ್ತು ಜೈಲುಶಿಕ್ಷೆ ವಿಧಿಸಲು ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ನಕಲಿ ವೈದ್ಯರ ವಿರುದ್ದ ಕೂಡಾ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು ಒಮ್ಮೆ ಪತ್ತೆಯಾದ ನಕಲಿ ವೈದ್ಯರು ನಂತರದಲ್ಲಿ ತಮ್ಮ ಕೇಂದ್ರದ ಹೆಸರು ಮತ್ತು ವಿಳಾಸ ಬದಲಿಸಿಕೊಂಡು ಜಿಲ್ಲೆಯ ಇತರೇ ಭಾಗದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಅಧಿಕವಾಗಿದ್ದು ಈ ಬಗ್ಗೆ ವ್ಯಾಪಕ ತಪಾಸಣೆಗಳನ್ನು ಕೈಗೊಂಡು, ಜಿಲ್ಲೆಯಲ್ಲಿ ನಕಲಿ ವೈದ್ಯರು ಕಂಡು ಬಾರದಂತೆ ಎಚ್ಚರವವಹಿಸುವಂತೆ ನಿರ್ದೇಶನ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನವೀಕರಣ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಮತ್ತು ಹೊಸದಾಗಿ ಅನುಮತಿ ಕೋರುವ ಸಂಸ್ಥೆಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಎಲ್ಲಾ ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು ಅನುಮತಿಯನ್ನು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಬಿ.ವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪ್ರವೀಣ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಿನಿ ಬೋರ್ಕರ್, ಐ.ಎಂ.ಎ. ಅಧ್ಯಕ್ಷ ಡಾ.ಸುರೇಶ್ ಭಟ್, ಮಹಿಳಾ ಸಾಮಾಜಿಕ ಕಾರ್ಯಕರ್ತೆ ಯಶೋಧಾ ಹೆಗಡೆ ಹಾಗೂ ಆರೋಗ್ಯ ಇಲಾಖೆಯ ವಿವಿಧ ತಾಲೂಕುಗಳ ವೈದ್ಯರು ಉಪಸ್ಥಿತರಿದ್ದರು.
ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ನಿಗಾ ಇರಲಿ;ಡೀಸಿ
ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಡೆಯುವ ನಿಟ್ಟಿನಲ್ಲಿ , ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ನಿರ್ದೇಶನ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಿ.ಸಿ. ಅಂಡ್ ಪಿ.ಎನ್.ಡಿ.ಟಿ ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ.ಸಿ. ಅಂಡ್ ಪಿ.ಎನ್.ಡಿ.ಟಿ ಕಾಯ್ದೆಯಡಿ ಜಿಲ್ಲೆಯಲ್ಲಿ 105 ಸ್ಕ್ಯಾನಿಂಗ್ ಸೆಂಟರ್ ಗಳು ನೊಂದಣಿಯಾಗಿದ್ದು ಅದರಲ್ಲಿ 80 ಕಾರ್ಯನಿರ್ವಸಹಿತ್ತಿದ್ದು ಈ ಎಲ್ಲಾ ಸೆಂಟರ್ ಗಳಿಗೆ ಪ್ರತೀ ತಿಂಗಳು ನಿಗಧಿಯಂತೆ ಅನಿರೀಕ್ಷಿತ ತಪಾಸಣೆ ಕೈಗೊಳ್ಳುವಂತೆ ಹಾಗೂ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್ ಸೆಂಟರ್ ಗಳ ನೊಂದಣಿಗೆ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸಿರುವವರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಅನುಮತಿಯನ್ನು ನೀಡುವಂತೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಬಿ.ವಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಿನಿ ಬೋರ್ಕರ್, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ಮಕ್ಕಳ ತಜ್ಞ ಡಾ.ವಿಶ್ವನಾಥ ಮಾಚಕನೂರ, ರೇಡಿಯಾಲಜಿಸ್ಟ್ ಡಾ.ಯುವರಾಜ ಪಟವರ್ಧನ್, ಸಮಾಜ ಸೇವಕರಾದ ಶ್ರೀಕಾಂತ ಮಹಾದೇವ ನಾಯ್ಕ್, ರೋಟರಿ ಕ್ಲಬ್ ನ ಹೇಮ್ಲಾ ಅಲ್ಫೋನ್ಸೋ ಉಪಸ್ಥಿತರಿದ್ದರು.
ಉತ್ತರ ಕನ್ನಡದಲ್ಲಿ ಹೊಸ ವರ್ಷ ಆಚರಣೆಗೆ ಡೀಸಿ ರೂಲ್ಸ್: ಈ ಸೂಚನೆ ಪಾಲಿಸಲೇಬೇಕು ಅಂದ್ರು ಜಿಲ್ಲಾಧಿಕಾರಿ..!