FIRE ACCIDENT; ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯ ಖಾದರಲಿಂಗ ದೇವಸ್ಥಾನದ ಸಮೀಪ ಪರ್ನಿಚರ್ ತಯಾರಿಸುವ ಅಡ್ಡೆಗೆ ಬೆಂಕಿ ತಗುಲಿ ಭಾರೀ ಅನಾಹುತವಾಗಿದೆ. ಬೆಳಿಗ್ಗೆ ಸುಮಾರು 4 ಗಂಟೆಯಷ್ಟೊತ್ತಿಗೆ ಬೆಂಕಿ ತಗುಲಿದ್ದು ಇಡೀ ಕಟ್ಟಿಗೆಯ ಅಡ್ಡೆಯೇ ಸುಟ್ಟು ಕರಕಲಾಗಿದೆ.

ಮಹ್ಮದ್ ಯೂನುಸ್ ಹೊಸಕೊಪ್ಪ ಎಂಬುವವರಿಗೆ ಸೇರಿದ ಪರ್ನಿಚರ್ ಅಡ್ಡೆ ಇದಾಗಿದ್ದು, ಬೆಂಕಿ ಅನಾಹುತದಲ್ಲಿ ಏನಿಲ್ಲವೆಂದರೂ ಅಂದಾಜು 50 ಲಕ್ಷ ಮೌಲ್ಯದ ಬೆಲೆಬಾಳುವ ಪರ್ನಿಚರಗಳು, ಕಟ್ಟಿಗೆಗಳು, ಮಷಿನ್ ಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಬೆಂಕಿ ಹೇಗೆ ತಗುಲಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಆದ್ರೆ ಅಷ್ಟೊತ್ತಿಗಾಗಲೇ ಬೆಂಕಿಯ ರೌದ್ರವಾತಾರ ಇಡೀ ಅಡ್ಡೆಯನ್ನೇ ಸುಟ್ಟು ಭಸ್ಮ ಮಾಡಿತ್ತು ಅಂತಾ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

