Student Problem; ಮುಂಡಗೋಡ ತಾಲೂಕಿನ ಪಾಳಾದ ಇಂದಿರಾಗಾಂದಿ ವಸತಿ ನಿಲಯದ ವಿದ್ಯಾರ್ಥಿಗಳು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಇಲ್ಲಿನ ಸಿಬ್ಬಂದಿಗಳು ಹಾಗೂ ಶಿಕ್ಷಕರ ಬೇಜವಾಬ್ದಾರಿಯಿಂದ ಕಳಪೆ ಆಹಾರ ಸೇವಿಸುವ ಅನಿವಾರ್ಯತೆಗೆ ಸಿಲುಕಿದ್ದಾರಾ..? ಅದೇಂತದ್ದೇ ಆಹಾರ ಸೇವಿಸಿದ್ರೂ ಅದನ್ನೇ ಅಮೃತವೆಂದು ಭಾವಿಸಿ ಯಾರಿಗೂ ತುಟಿ ಬಿಚ್ಚದೇ ಒಳಗೊಳಗೇ ತಮಗಾದ ನೋವುಗಳನ್ನು ಅದುಮಿಕೊಂಡಿದ್ದಾರಾ..? ಇದೇಲ್ಲ ಪ್ರಶ್ನೆಗಳೂ ಅಲ್ಲಿನ ಆ ರಾಶಿ ರಾಶಿ ನುಸಿಗಳ ಸಾಮ್ರಾಜ್ಯ ನೋಡಿದ್ರೆ ಎಂಥವರಿಗೂ ಅನ್ನಿಸದೇ ಇರಲ್ಲ..

ಹೌದು, ಬಡ ಹಿಂದುಳಿದ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯನ್ನು ಸ್ಥಾಪಿಸಿದೆ. ಅದ್ರಂತೆ ಮುಂಡಗೋಡ ತಾಲೂಕಿನ ಪಾಳಾದಲ್ಲೂ ಇಂತಹದ್ದೊಂದು ವಸತಿ ಸೇರಿ ಎಲ್ಲಾ ಸೌಲಭ್ಯಗಳೊಂದಿಗೆ ಶಾಲೆ ತೆರೆದುಕೊಂಡಿದೆ. ಆದ್ರೆ, ಇಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳ ನಿರ್ಲಕ್ಷದಿಂದ ಈ ವಸತಿ ಶಾಲೆಯ ಮಕ್ಕಳಿಗೆ ಆಹಾರವಾಗಬೇಕಿದ್ದ ಕ್ವಿಂಟಾಲುಗಟ್ಟಲೇ ಗೋದಿ ನುಸಿಗಳ ಪಾಲಾಗಿದೆ. ದುರಂತ ಅಂದ್ರೆ ನುಸಿಗಳು ತಿಂದುಳಿಸಿದ ಗೋದಿಯನ್ನೇ ವಿದ್ಯಾರ್ಥಿಗಳಿಗೆ ಉಣ ಬಡಿಸ್ತಿದಾರಾ ಅನ್ನೋ ಅನುಮಾನ ಎಲ್ಲರಿಗೂ ಕಾಡ್ತಿದೆ.

ದಲಿತ ಮುಖಂಡರ ಭೇಟಿ..!
ಅಸಲು, ಈ ವಸತಿ ಶಾಲೆಯ ಮಕ್ಕಳಿಗೆ ಉಣಬಡಿಸಲು ಉಪಯೋಗಿಸುವ ಕಿರಾಣಿ ಸಾಮಗ್ರಿಗಳು ಅಕ್ಷರಶಃ ಕ್ರಿಮಿ ಕೀಟಗಳ ಪಾಲಾಗ್ತಿವೆ. ಅದ್ರಲ್ಲೂ ಇಲ್ಲಿ ಸಂಗ್ರಹಿಸಿರುವ ಗೋದಿಯಲ್ಲಿ ಆಕ್ರಮಿಸಿರುವ ನುಸಿಗಳನ್ನು ನೀವೊಮ್ಮೆ ನೋಡಿಬಿಟ್ರೆ ಒಂದು ಕ್ಷಣ ದಂಗಾಗಿಬಿಡ್ತಿರೆನೊ. ಯಾಕಂದ್ರೆ ಇಲ್ಲಿನ ನುಸಿಗಳ ಸಾಮ್ರಾಜ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಈ ಕಾರಣಕ್ಕಾಗಿನೇ ಮುಂಡಗೋಡಿನ ದಲಿತ ಮುಖಂಡ ಬಸವರಾಜ್ ಸಂಗಮೇಶ್ವರ ಈ ಸ್ಥಳಕ್ಕೆ ಭೇಟಿ ನೀಡಿ ನುಸಿಗಳ ಸಾಮ್ರಾಜ್ಯ ಕಂಡು ದಂಗಾಗಿದ್ದಾರೆ. ಅಯ್ಯೊ ದೇವಾ ಇಂತಹ ಆಹಾರ ತಿಂದ್ರೆ ಮಕ್ಕಳ ಗತಿ ಏನಾಗಬೇಡ ಅಂತಾ ಮಮ್ಮಲ ಮರುಗಿದ್ದಾರೆ.
ರಾಶಿ ರಾಶಿ ಹುಳ..!
ಇಲ್ಲಿ ಸಂಗ್ರಹಿಸಲಾಗಿರೋ ಗೋದಿ ಸೇರಿಸಂತೆ ದವಸ ಧಾನ್ಯಗಳಲ್ಲಿ ನುಸಿಗಳು ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿವೆ. ಇಡೀ ದವಸ ಸಾಮಗ್ರಿಗಳ ಚೀಲಗಳಿಗೆ ನುಸಿಗಳು ಮೆತ್ತಿಕೊಂಡಿವೆ. ಇಷ್ಟಿದ್ರೂ ಇಲ್ಲಿನ ಪ್ರಾಂಶುಪಾಲರು ಮಾತ್ರ ಇದೇಲ್ಲ ನಮಗೆ ಸಂಬಂಧವೇ ಇಲ್ಲಅಂತ ಬೆಪ್ಪಗೆ ಕುಳಿತಿದ್ದಾರೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ ಅಂತಾ ಸಾರ್ವಜನಿಕರು,ಪೋಷಕರು ಸೇರಿ ದಲಿತ ಮುಖಂಡ ಬಸವರಾಜ್ ಸಂಗಮೇಶ್ವರ ಆಗ್ರಹಿಸಿದ್ದಾರೆ.