Crime News; ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆಯಷ್ಟೆ ಪುಡಿ ರೌಡಿಗಳ ಅಟ್ಟಹಾಸದಿಂದ ಓರ್ವ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದ ಪ್ರಕರಣ ನಡೆದ ಬೆನ್ನಲ್ಲೇ ಇನ್ನೊಂದು ಚಾಕು ಇರಿತ ಪ್ರಕರಣ ತಡ ರಾತ್ರಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದ್ದು ನಗರದ ಯಲ್ಲಾಪುರ ಓಣಿಯ ಅಫ್ತಾಬ್ ಎಂಬ ಯುವಕನಿಗೆ ನಾಲೈದು ಜನರ ಗುಂಪೊಂದು ಚಾಕು ಇರಿದು ಪರಾರಿಯಾಗಿದ್ದಾರೆ. ಯಲ್ಲಾಪುರ ಓಣಿಯ ಬುಡ್ಡು ಪಾನ್ ಶಾಪ್ ಬಳಿ ಈ ಘಟನೆ ನಡೆದಿದ್ದು, ಹಳೆಯ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ತಡರಾತ್ರಿ ಅಫ್ತಾಬ್ ನ ಮನೆಗೆ ಆಗಮಿಸಿದ್ದ ಜೈಯದ್, ತೋಹೀದ್, ಚೋರ್ ಫಾರೂಕ್ ಸೇರಿದಂತೆ ಐದು ಜನ ದುಷ್ಕರ್ಮಿಗಳು ಅಫ್ತಾಬ್ ನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲೇ ಬೆದರಿಕೆ ಹಿನ್ನೆಲೆ ಇಂದು ಅಫ್ತಾಬ್ ಹಾಗೂ ಆತನ ಕುಟುಂಬಸ್ಥರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ದೂರು ನೀಡಿ ಸಂಜೆ ಮನೆಗೆ ವಾಪಸ್ ತೆರಳುವ ಸಂದರ್ಭಅಫ್ತಾಬ್ ನನ್ನ ಅಡ್ಡಗಟ್ಟಿ ಆತನ ಸೊಂಟಕ್ಕೆ, ಬೆನ್ನಿಗೆ ಹಾಗೂ ಎದೆಯ ಬಾಗಕ್ಕೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ. ಏಕಾ ಏಕಿ ಮನಬಂದಂತೆ ಚಾಕು ಇರಿದು ಪರಾರಿಯಾಗಿರುವ ಐದು ಜನ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡ ಅಫ್ತಾಬ್ ನನ್ನ ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಲಾಗಿದೆ.
ಜನರು ಆತಂಕದಲ್ಲಿ..!
ಹುಬ್ಬಳ್ಳಿಯಲ್ಲಿ ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ದಿನಿನಿತ್ಯ ನಡೆಯುತ್ತಲೇ ಇವೆ.ಅದರಲ್ಲಿಯೂ ಚಾಕು ಚೂರಿ ಇರಿತ, ಗುಂಪು ಘರ್ಷಣೆ , ಹೊಡೆದಾಟ, ಕಳ್ಳತನ ಪ್ರಕರಣಗಳೇ ಹೆಚ್ಚಾಗಿದ್ದು ಜನರು ಆತಂಕದಲ್ಲಿ ಇದ್ದಾರೆ.
