Valmiki Jayanti News:
ಮುಂಡಗೋಡ:ಮಹಾಪುರುಷರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಒಟ್ಟಾಗಿ ಆಚರಣೆ ಮಾಡಬೇಕು ಬಹುತೇಕ ಎಲ್ಲ ಸಮುದಾಯದ ಜನಾಂಗಗಳಲ್ಲಿ ಮಹಾತ್ಮರು ಹುಟ್ಟಿ ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಟೌನ್‌ ಹಾಲ್ ನಲ್ಲಿ ಮಂಗಳವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮುಖ್ಯ. ಅನೇಕ ಮಹಾಪುರುಷರು ಬಡತನದಲ್ಲಿ ಹುಟ್ಟಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಾಧನೆ ಮಾಡಿದ್ದಾರೆ. ವಾಲ್ಮೀಕಿಯವರು ಬೇಟೆಯಾಡಿ ಜೀವನ ನಡೆಸುತ್ತಿದ್ದರು. ನಂತರ ತಪಸ್ಸು ಮಾಡಿ ರಾಮಾಯಣ ಗ್ರಂಥ ಬರೆದರು. ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ಉಪನ್ಯಾಸಕರ ಮಾತು..!
ಅಣ್ಣಪ್ಪ ತಳವಾರ ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ರಾಮಾಯಣದ ಬಗ್ಗೆ ಸಮುದಾಯದ ಎಷ್ಟೋ ಬಂಧುಗಳಿಗೆ ಗೊತ್ತಿಲ್ಲ. ರಾಮನ ಆಯಣ ಅಥವಾ ಚರಿತ್ರೆಯೇ ರಾಮಾಯಣ. ಜಗತ್ತಿನಲ್ಲಿಯೇ ಅತೀ ಶ್ರೇಷ್ಟ ಗ್ರಂಥಗಳಲ್ಲಿ ಒಂದು. 24 ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣದ ಶ್ಲೋಕಗಳು ರಾಮನ ಗುಣಗಳನ್ನು ಎತ್ತಿ ತೋರಿಸುತ್ತವೆ.
ರಾಮಾಯಣದಲ್ಲಿ ಪ್ರಾಮಾಣಿಕತೆ, ಧರ್ಮನಿಷ್ಠೆ ಸಹೋದರತೆ ಎಲ್ಲವುಗಳ ಬಗ್ಗೆ ಮಹರ್ಷಿ ವಾಲ್ಮೀಕಿ ತಿಳಿಸಿದ್ದಾರೆ ಆದರೆ ಎಲ್ಲಿಯೂ ಅವರು ತಮ್ಮ ಬಗ್ಗೆ ಹೇಳಿಕೊಳ್ಳಲಿಲ್ಲ. ವಾಲ್ಮೀಕಿಯವರು ದರೋಡೆ ಡಕಾಯತಿ ಮಾಡುತ್ತಿದ್ದರು ಎಂಬುದು ಕಲಬೆರಕೆ ದಯವಿಟ್ಟು ಸಮುದಾಯದವರು ಆ ರೀತಿ ಯಾರೂ ಬಳಸಬಾರದು. ಮೂಲತಃ ವಾಲ್ಮೀಕಿಯವರು ಬರೆದ ರಾಮಾಯಣದ ಆಧಾರದ ಮೇಲೆ ಪರಿವರ್ತನೆಯಾಗುತ್ತಾ ಬಂದಿದೆ. ಸಹೋದರತೆಯ ಬಾಂಧವ್ಯವನ್ನು ಕಲಿಯಬೇಕು. ವಾಲ್ಮೀಕಿಯವರು ಮೂಲವಾಗಿ ಶೋಷಣೆಗೊಳಗಾದವರು. ಸಂಘಟನೆ ಇಚ್ಛಾ ಶಕ್ತಿ ಕೊರತೆಯಿಂದಾಗಿ ಶೋಷಣೆಗೆ ಒಳಗಾಗುವುದಕ್ಕೆ ಕಾರಣ. ಎಲ್ಲಾ ಸಮುದಾಯದವರು ಒಟ್ಟುಗೂಡಿ ಜಯಂತಿಯನ್ನು ಆಚರಿಸಬೇಕು ಎಂದರು.

ತಾಲೂಕಾಧ್ಯಕ್ಷ ಸುರೇಶ್ ಕಲ್ಲೋಳ್ಳಿ ಹೇಳಿದ್ದು..!
ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸುರೇಶ ಕಲ್ಲೊಳ್ಳಿ ಮಾತನಾಡಿ ರಾಮಾಯಣ ಒಂದು ತತ್ವಶಾಸ್ತ್ರ. ಸೋದರ ಸಂಬಂಧ, ಪುತ್ರ ವಾತ್ಸಲ್ಯ ಮತ್ತು ಸತಿ-ಪತಿಗಳ ಸಂಬಂಧವನ್ನು ಅತಿ ವಿಸ್ತಾರವಾಗಿ ಮಹರ್ಷಿ ವಾಲ್ಮೀಕಿ
ತಿಳಿಸಿದ್ದಾರೆ. ರಾಮಾಯಣ ಒಂದು ರಾಜ್ಯಶಾಸ್ತ್ರ ಕೂಡ ಹೌದು. ವಿಜ್ಞಾನ ಗ್ರಂಥ ತತ್ವ ಶಾಸ್ತ್ರಗಳ ಉಲ್ಲೇಖ ಮಾಡಲಾಗಿದೆ. ಜೀವನದ ಘಟ್ಟಗಳ ಕಾಲಜ್ಞಾನ. ರಾಮಾಯಣ ಸನಾತನ ಸಂಸ್ಕೃತಿಯ ಇತಿಹಾಸ. ಮಹರ್ಷಿ ವಾಲ್ಮೀಕಿ ಒಬ್ಬ ಪಾತ್ರಧಾರಿ. ನಮ್ಮ ದೇಶದ ವರ್ಣನೆ ಇದೆ ಇಡೀ ಜಗತ್ತಿಗೇ ಸೇರಿದ್ದು. ಜಾಗತಿಕ ಮೌಲ್ಯಗಳನ್ನು ಕೊಟ್ಟ ಗ್ರಂಥ ಎಂದರು. ಪ.ಪಂ.ಸದಸ್ಯ ಅಶೋಕ ಚಲವಾದಿ ಮಾತನಾಡಿ ಕತ್ತಲೆಯಿಂದ ಬೆಳಕಿನ ಕಡೆಗೆ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ವ್ಯಕ್ತಿತ್ವದ ಆದರ್ಶ ಹೊಂದಿರುವುದೇ ವಾಲ್ಮೀಕಿ ರಾಮಾಯಣ ಎಂದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ವಾಲ್ಮೀಕಿ ಗದ್ದುಗೆಯಿಂದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಕರೀಂ, ಶ್ರೀಕಾಂತ ಸಾನು, ಪ.ಪಂ.ಮುಖ್ಯಾಧಿಕಾರಿ ಸಂತೋಷಕುಮಾರ್ ಹಾಳಕಲ್ಲಾಪುರ, ಬೀಬಿಜಾನ ಮುಲ್ಲಾನವರ, ಚಿದಾನಂದ ಜರಿಜನ, ಸೋಮಲಿಂಗಪ್ಪ ಛಬ್ಬಿ, ರಾಘವೇಂದ್ರ ಟಪಾಲದವರ, ಹನುಮಂತಪ್ಪ ಆರೆಗೊಪ್ಪ, ಹನುಮಂತ ಭಜಂತ್ರಿ, ರಾಘವೇಂದ್ರ ಮಳಗಿಕರ, ಗಡೇದ, ದಫೇದಾರ, ಬಸವರಾಜ ವಾಲ್ಮೀಕಿ, ಮಂಜುನಾಥ ಪಾಟೀಲ ಮುಂತಾದವರಿದ್ದರು.

ಬ್ಲೂಮಿಂಗ್ ಬಡ್ಸ್ ಶಾಲೆಯ ಮಕ್ಕಳು ಪ್ರಾರ್ಥಿಸಿ, ನಾಡಗೀತೆ ಹೇಳಿದರು. ಬಿ.ಎಸ್.ಸಿದ್ದಯ್ಯನವರ ಸ್ವಾಗತಿಸಿದರು. ಸುರೇಶ ಪೂಜಾರ ನಿರೂಪಿಸಿ ವಂದಿಸಿದರು.

error: Content is protected !!