God Astrology : ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಶ್ರಾವಣ ಮಾಸದ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ, ಎಚ್ಚರ” ಎಂದು ಕಾರ್ಣಿಕ ನುಡಿಯಲಾಗಿದೆ.
ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವನ್ನೇರಿ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ ಎಂದು ಕಾರ್ಣಿಕ ಹೇಳಿದ್ದಾರೆ.
ಹನುಮಂತ ದೇವರ ಕಾರ್ಣಿಕವನ್ನು ಆಧರಿಸಿ ಈ ಭಾಗದ ರೈತಾಪಿ ಜನರು ಇಡೀ ವರ್ಷದ ಮಳೆ, ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ರಾಜಕೀಯ ವಿದ್ಯಮಾನಗಳು, ಪ್ರಕೃತಿ ವೈಪರೀತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗುಹೋಗುಗಳನ್ನು ಲೆಕ್ಕಾಚಾರ ಹಾಕುತ್ತಾರೆ.
“ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ ” ಎಂಬ ಕಾರ್ಣಿಕದ “ಕೊನೆಯಲ್ಲಿ ಎಚ್ಚರ ಎಂದು ಹೇಳಿರುವುದರಿಂದ ಈ ಬಾರಿ ರೈತಾಪಿ ವರ್ಗಕ್ಕೆ ಸ್ವಲ್ಪ ಅಡಚಣೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ದೇಶದೆಲ್ಲೆಡೆ ಅತಿವೃಷ್ಟಿಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಬಹುದು.
ಶಿವನ ತುರುಬಿನಲ್ಲಿರುವ ಗಂಗೆಗೆ ಭೂ ಲೋಕದ ಗಿಳಿ ಹಾರುವುದೆಂದರೆ ಈ ಬಾರಿ ಮುಂಗಾರಿಗಿಂತ ಹಿಂಗಾರು ಮಳೆ ತುಸು ಜೋರಾಗಿರಬಹುದು ಎಂದು ಅರ್ಥೈಸಲಾಗಿದೆ. ಇನ್ನು ರಾಜ್ಯ ರಾಜಕಾರಣಕ್ಕೆ ಇದನ್ನು ವಿಶ್ಲೇಷಿಸಿದರೆ ರಾಜ್ಯ ರಾಜಕೀಯದಲ್ಲಿ ಏರುಪೇರಾಗಬಹುದು ಎಂದು ಜನರು ವಿಶ್ಲೇಷಣೆ ಮಾಡುತ್ತಿದ್ದಾರೆ.