Promoted News; ಬೆಳಗಾವಿ: ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಅವಮಾನಕ್ಕೀಡಾಗಿ ರಾಜೀನಾಮೆಗೆ ಮುಂದಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ವಿ. ಭರಮನಿ ಅವರಿಗೆ ರಾಜ್ಯ ಸರ್ಕಾರ ಪದೋನ್ನತಿ ನೀಡಿದೆ. ಈಗ ಅವರನ್ನು ಬೆಳಗಾವಿ ಮಹಾನಗರ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯಾಗಿ ನೇಮಕ ಮಾಡಿದೆ.

ಬೆಳಗಾವಿಯಲ್ಲಿ ಸಬ್ ಇನ್ಸ್ಪೆಕ್ಟರ್, ಎಸಿಪಿ ಅಗಿ ಅವರು ಕಾರ್ಯನಿರ್ವಹಿಸಿದ್ದರು. ಇದೀಗ ರಾಜ್ಯ ಸರ್ಕಾರ ಅವರಿಗೆ ಪದೋನ್ನತಿ ನೀಡಿ, ಬೆಳಗಾವಿ ಜಿಲ್ಲೆಗೆ ನಿಯುಕ್ತಿ ಮಾಡಿದೆ.

ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅವರು ವೇದಿಕೆಯಲ್ಲಿ ಭಾಷಣ ಮಾಡಲು ಮುಂದಾದಾಗ ವೇದಿಕೆಯ ಮುಂಭಾಗದಲ್ಲಿ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಇದರಿಂದ ಕೆರಳಿದ್ದ ಸಿದ್ದರಾಮಯ್ಯ ಅಲ್ಲೇ ಇದ್ದ ಧಾರವಾಡ ಎಎಸ್‌ಪಿಯಾಗಿದ್ದ ಭರಮನಿ ಅವರಿಗೆ ಹೊಡೆಯುವ ರೀತಿ ಕೈ ಎತ್ತಿದರು. ಬಳಿಕ ಸಿದ್ದರಾಮಯ್ಯ ಅವರ ವರ್ತನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಘಟನೆಯಿಂದ ತೀವ್ರ ನೊಂದಿದ್ದ ನಾರಾಯಣ ಬರಮನಿ ಅವರು ಸೇವಾ ನಿವೃತ್ತಿಗೆ ಮುಂದಾಗಿದ್ದರು. ಕಳೆದ ತಿಂಗಳು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿಆರ್‌ಎಸ್‌ಗೆ ಮನವಿ ಸಲ್ಲಿಸಿದ್ದರು.

ಆದರೆ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅವರನ್ನು ಸಮಾಧಾನಪಡಿಸಿ ಮತ್ತೆ ಸೇವೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಅವರಿಗೆ ಪದೋನ್ನತಿ ನೀಡಿ, ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಿದೆ.

error: Content is protected !!