ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

Uttar Kannada News Today; ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!

**************************

Uttar Kannada News Today;
ಸಣ್ಣ ನೀರಾವರಿ ಮೂಲಗಳ ನಿಖರ ಗಣತಿ ಮಾಡಿ: ಅಪರ ಜಿಲ್ಲಾಧಿಕಾರಿ

ಕಾರವಾರ: ಜಿಲ್ಲೆಯಲ್ಲಿ ನಡೆಯುವ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಸಂದರ್ಭದಲ್ಲಿ , ಜಿಲ್ಲೆಯಲ್ಲಿರುವ ಸಣ್ಣ ನೀರಾವರಿಯ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ ಮತ್ತು ನಿಖರವಾಗಿ ಗಣತಿ ಮಾಡುವ ಮೂಲಕ ನೀರಾವರಿ ಮೂಲಗಳ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಮೊಬೈಲ್ ಅಪ್ಲಿಕೇಷನ್ ಮೂಲಕ ನಡೆಯುವ 7 ನೇ ಸಣ್ಣ ನೀರಾವರಿ ಗಣತಿ ಮತ್ತು 2 ನೇ ನೀರಿನಾಸರೆಗಳ ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಗಣತಿಯಿಂದ ರಾಜ್ಯದಲ್ಲಿ ಸಣ್ಣ ನೀರಾವರಿಯ ವಿವಿಧ ಮೂಲಗಳನ್ನು ಸಂಪೂರ್ಣವಾಗಿ ಗಣತಿ ಮಾಡುವುದರ ಮೂಲಕ, ಮುಂಗಾರು, ಹಿಂಗಾರು ಮತ್ತು ಬೇಸಿಗೆ ಕಾಲಗಳಲ್ಲಿ ನೀರಾವರಿಯಾದ ಕ್ಷೇತ್ರದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗುವುದು ಹಾಗೂ ಅಂತರ್ಜಲದ ಪ್ರಮಾಣವನ್ನು ಅಂದಾಜಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಲಭ್ಯತೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದರು.

ಗಣತಿ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಅಗೆದ ಬಾವಿಗಳು, ಆಳವಿಲ್ಲದ ಕೊಳವೆ ಬಾವಿಗಳು, ಮಧ್ಯಮ ಆಳವಾದ ಕೊಳವೆ ಬಾವಿಗಳು, ಆಳದ ಕೊಳವೆಬಾವಿಗಳು ಮೇಲ್ಮೈಯಲ್ಲಿ ಹರಿಯುವ ನೀರಾವರಿ ಯೋಜನೆಗಳು, ಏತ ನೀರಾವರಿ ಯೋಜನೆಗಳನ್ನು ಗಣತಿ ಮಾಡುವಂತೆ ತಿಳಿಸಿದ ಅವರು, ಗಣತಿದಾರರು ರೈತರೊಂದಿಗೆ ಮತ್ತು ಸ್ಥಳದ ಮಾಲೀಕರೊಂದಿಗೆ ಸ್ಥಳಗಳಿಗೆ ಭೇಟಿ ನೀಡಿ, ಅವರಿಗೆ ಯೋಜನೆಯ ಮಹತ್ವದ ಬಗ್ಗೆ ವಿವರಿಸಿ ಅತ್ಯಂತ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸೋಮಶೇಖರ ಮೇಸ್ತಾ, 5 ವರ್ಷಗಳಿಗೆ ಒಮ್ಮೆ ನಡೆಯುವ ಸಣ್ಣ ನೀರಾವರಿ ಗಣತಿ ಕಾರ್ಯವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, ಈ ಬಾರಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯುತ್ತಿದ್ದು, ಅತ್ಯಂತ ನಿಖರವಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. 2000 ಹೆಕ್ಟೇರ್ ಒಳಗಿನ ಅಚ್ಚುಕಟ್ಟು ಪ್ರದೇಶವನ್ನು ಸಣ್ಣ ನೀರಾವರಿ ಯೋಜನೆಗಳೆಂದು ಪರಿಗಣಿಸಲಾಗಿದ್ದು, 4 ರಿಂದ 40 ಹೆಕ್ಟೇರ್ ಅಚ್ಚುಕಟ್ಟುಳ್ಳ ಯೋಜನೆಗಳು ಜಿಲ್ಲಾ ಪಂಚಾಯತ್ ಅಧೀನದಲ್ಲಿ ಬರಲಿದ್ದು, 2000 ಹೆಕ್ಟೇರ್‌ಗಿಂತ ಹೆಚ್ಚು ಅಚ್ಚಕಟ್ಟುಳ್ಳ ಯೋಜನೆಗಳು ಬೃಹತ್ ನೀರಾವರಿ ಇಲಾಖೆಯ ಅಧೀನದಲ್ಲಿ ಬರಲಿವೆ. ಈ ಗಣತಿ ಕಾರ್ಯದಲ್ಲಿ ಗಣತಿದಾರರು ಅತ್ಯಂತ ಜವಾಬ್ದಾರಿಯಿಂದ ಮತ್ತು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್, ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಹಾಜರಿದ್ದರು.

ಜಿಲ್ಲಾ ಅಂಕಿ ಅಂಶ ಇಲಾಖೆಯ ಸಹಾಯಕ ನಿರ್ದೇಶಕ ದತ್ತಾತ್ರೇಯ ನಾಯ್ಕ ತರಬೇತಿ ನೀಡಿದರು.

****************

Uttar Kannada News Today;
ಜೂ.24 ಮತ್ತು 25 ರಂದು ಜನತಾ ದರ್ಶನ ಕಾರ್ಯಕ್ರಮ

ಕಾರವಾರ; ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯರವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮವು ಜೂ.24 ರಂದು ಮಧ್ಯಾಹ್ನ 3 ಗಂಟೆಗೆ ಭಟ್ಕಳ ಸಚಿವರ ಕಚೇರಿಯಲ್ಲಿ ಹಾಗೂ ಜೂ.25 ರಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾವರ ಸಚಿವರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ಕ್ಷೇತ್ರದ ಜನರು ಮಾನ್ಯ ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಅಹವಾಲುಗಳನ್ನು ನೀಡಬಹುದಾಗಿದೆ.

****************

Uttar Kannada News Today;
ಜೂ.30 ರಂದು ಜಿ.ಪಂ ತ್ರೈ ಮಾಸಿಕ ಕೆ.ಡಿ.ಪಿ ಸಭೆ

ಕಾರವಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ತ್ರೆöÊ ಮಾಸಿಕ ಪ್ರಗತಿ ಪರೀಶಿಲನಾ (ಕೆ.ಡಿ.ಪಿ.) ಸಭೆಯು ಜೂ.30 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****************

Uttar Kannada News Today;
ಜೆ.ಆರ್.ಎಫ್ ಮಾದರಿಯಲ್ಲಿ ಪಿ.ಎಚ್.ಡಿ ಫೆಲೋಶಿಫ್‌ಗೆ: ಅರ್ಜಿ ಆಹ್ವಾನ.

ಕಾರವಾರ; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಭಾರತ ಸರ್ಕಾರದ ಶಾಸನಬದ್ಧ ಅಂಗಿಕೃತವಾದ ವಿಶ್ವವಿದ್ಯಾನಿಲಯಗಳಲ್ಲಿ ಪೂರ್ಣಕಾಲಿಕವಾಗಿ (Full Time) ಪಿ.ಎಚ್.ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಪಿ.ಎಚ್.ಡಿ ಫೆಲೋಶಿಪ್ ನೀಡಲಾಗುತ್ತಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು, ಮತೀಯ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. ವಿದ್ಯಾರ್ಥಿ ವಯಸ್ಸು ಗರಿಷ್ಟ ಮಿತಿ 35 ಮೀರಿರಬಾರದು, ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು. ವಿದ್ಯಾರ್ಥಿ ಯಾವುದೇ ಸರ್ಕಾರಿ ಉದ್ಯೋಗಿಯಾಗಿರಬಾರದು. ಇತರೇ ಮೂಲದಿಂದ ಯಾವುದೇ ಫೆಲೋಶಿಪ್ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.

ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ವೆಬ್‌ಸೈಟ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿsಸಲು ಸೆಪ್ಟಂಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿಸಂಖ್ಯೆ: 8277799990/08382-220336 ವೆಬ್‌ಸೈಟ್ https://dom.karnataka.gov.in/ ಅಲ್ಪಸಂಖ್ಯಾತರ ಕಛೇರಿ, ತಾಲೂಕಾ ವಿಸ್ತರಣಾಧಿಕಾರಿಗಳ ಕಛೇರಿ ಅಥವಾ ಅಯಾ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***************

Uttar Kannada News Today;
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ.

ಕಾರವಾರ; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಜೂ.27 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮೀನುಗಾರಿಗೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದು, ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಸತೀಶ ಕೆ. ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ದಿನಕರ ಕೆ. ಶೆಟ್ಟಿ, ಭೀಮಣ್ಣ ಟಿ. ನಾಯ್ಕ, ವಿಧಾನ ಪರಿಷತ್ ಶಾಸಕರಾದ ಎಸ್. ವಿ.ಸಂಕನೂರು, ಶಾಂತಾರಾಮ ಬುಡ್ನ ಸಿದ್ದಿ, ಗಣಪತಿ ಡಿ.ಉಳ್ವೇಕರ ಹಾಗೂ ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

******************

Uttar Kannada News Today;
ಕಾರವಾರ ತಾಲೂಕಿನಲ್ಲಿ APT 2.0 ತಂತ್ರಾಂಶಕ್ಕೆ ಚಾಲನೆ

ಕಾರವಾರ; ಅಂಚೆ ಇಲಾಖೆಯ ನವೀನ ತಂತ್ರಾAಶ APT 2.0 ಅನ್ನು ಕಾರವಾರ ತಾಲೂಕಿನ ವಿವಿಧ ಶಾಖೆಗಳಲ್ಲಿ ಭಾನುವಾರ ಅಳವಡಿಸಲಾಯಿತು.

ನಗರದ ಕೈಗಾ, ಕದ್ರಾ, ಆಸ್ನೋಟಿ, ಅಂಗಡಿ, ಹಳಗ ಮಾಜಾಳಿ, ಸದಾಶಿವಗಡ, ಹಬ್ಬುವಾಡ, ನಂದನಗದ್ದ, ಕೋಡಿಬಾಗ, ಬೈತಕೋಲ್, ಕಾರವಾರ ಪ್ರಧಾನ ಅಂಚೆ ಕಚೇರಿ, ಚೆಂಡಿಯ, ನೌಕನೆಲೆ(ನೆವೆಲ್‌ಬೇಸ್), ಕಾರವಾರ ಮಾರ್ಕೆಟ್ ಹಾಗೂ ಬಿಣಗಾ ಕಚೇರಿಗಳು ಮತ್ತು ಅಂಕೋಲಾ ತಾಲೂಕಿನ ಅಂಕೋಲಾ ಶೆಟಗೇರಿ ವಂದಿಗೆ ಬೇಲೆಕೇರಿ ಮತ್ತು ಅವರ್ಸಾ ಕಚೇರಿಯಲ್ಲಿ ಈ ಸುಧಾರಿತ ತಂತ್ರಾಂಶವನ್ನು ಅಳವಡಿಸಿಕೊಂಡ ಶಾಖೆಗಳಾಗಿವೆ.

ಈ ವಿಶೇಷ ಕಾರ್ಯಕ್ರಮಕ್ಕೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ಯ ದೀಪ ಬೆಳಗಿಸಿ ಹಾಗೂ ಅಂಚೆ ಗ್ರಾಹಕರಿಗೆ ರಶೀದಿ ನೀಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

APT 2.0 ನ್ನು ಅಳವಡಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಧಾರಿತ, ವೇಗದ ಹಾಗೂ ನಿಖರ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಅಂಚೆ ಅಧೀಕ್ಷಕ ಅಕ್ಷಯ ಕಾಮತ್, ಪೋಸ್ಟ್ ಮಾಸ್ಟರ್ ಶ್ರೀಧರ್ ಕುವಳೆಕಾರ್, ಇತರೆ ಅಂಚೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

*********************

Uttar Kannada News Today;
ಉತ್ತರ ಕನ್ನಡದ 24 ಗಂಟೆಗಳಲ್ಲಿನ ಮಳೆ ವಿವರ

ಕಾರವಾರ; ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 36.2 ಮಿಮೀ, ಭಟ್ಕಳದಲ್ಲಿ 41.1 ಹಳಿಯಾಳ 7.4 ಹೊನ್ನಾವರ 43.0 ಕಾರವಾರ 31.6 ಕುಮಟಾ 31.6 ಮುಂಡಗೋಡ 11.9 ಸಿದ್ದಾಪುರ 43.5 ಶಿರಸಿ 36.4 ಸೂಪಾ 40.7 ಯಲ್ಲಾಪುರ 9.6 ದಾಂಡೇಲಿಯಲ್ಲಿ 15.8 ಮಿಲಿ ಮೀಟರ್ ಮಳೆ ಸುರಿದಿದೆ.

error: Content is protected !!