Bankapur Crime News:
ಬಂಕಾಪುರ: ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನ ಇಬ್ಬರು ಸ್ನೇಹಿತರೇ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಬಾಲಕಿಯ ಪ್ರಿಯಕರ, ದೌರ್ಜನ್ಯವೆಸಗಿದ ಓರ್ವ ಆರೋಪಿ ಹಾಗೂ ರಾಜಿ ಪಂಚಾಯತಿ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಗೋಣಿರುದ್ರಾ ಶಿಗ್ಗಟ್ಟಿ (24), ಮಂಜುನಾಥ ಶಿಗ್ಗಟ್ಟಿ (23), ಲಕ್ಷ್ಮಣ ಕಬನೂರ ಹಾಗೂ ಮಾರುತಿ ಶಿಗಟ್ಟಿ ಎಂದು ಗುರುತಿಸಲಾಗಿದೆ. ಇವರನ್ನು ಬಂಕಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಅಣ್ಣಪ್ಪ ಕಬ್ಬೂರು ಎಂಬಾತ ತಲೆಮರೆಸಿಕೊಂಡಿದ್ದಾನೆ.

ಅಪ್ರಾಪ್ತೆ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆಕೆಯ ತಾಯಿ ಬಂಕಾಪುರ ಠಾಣೆಯಲ್ಲಿ ಜೂನ್​ 2ರಂದು ದೂರು ನೀಡಿದ್ದರು. ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

”ಬಾಲಕಿಯು ತನ್ನ ಪ್ರಿಯಕರನ ಜೊತೆಗಿನ ದೈಹಿಕ ಸಂಪರ್ಕದಿಂದ ಗರ್ಭಿಣಿಯಾಗಿದ್ದಳು. ಬಳಿಕ ಪ್ರಿಯಕರನೇ ಆಕೆಗೆ ಮಾತ್ರೆ ನೀಡಿ ಅಬಾರ್ಸನ್​ ಮಾಡಿಸಿದ್ದಾನೆ. ಆದರೆ ಬಾಲಕಿಯು ಯುವಕನನ್ನು ಪ್ರೀತಿಸುತ್ತಿರುವ ವಿಚಾರವನ್ನೇ ಮುಂದಿಟ್ಟುಕೊಂಡು ಬೆದರಿಸಿದ ಆತನ ಸ್ನೇಹಿತರು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರೀತಿ ವಿಚಾರವನ್ನು ನಿಮ್ಮ ತಂದೆ, ತಾಯಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕಿ ಬಾಲಕಿಯ ಮೇಲೆ ಇಬ್ಬರು ಪ್ರತ್ಯೇಕವಾಗಿ ದೌರ್ಜನ್ಯ ಮಾಡಿದ್ದಾರೆ. ಮಂಜುನಾಥ್ ಶಿಗಟ್ಟಿ ಮತ್ತು ಅಣ್ಣಪ್ಪ ಆನಂದಪ್ಪ ಕಬ್ಬೂರು ಎಂಬ ಆರೋಪಿಗಳು ಮಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ” ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

Bankapur Crime News:

”ನನ್ನ ಮಗಳು ಪ್ರಾಪ್ತಳಾಗುತ್ತಿದ್ದಂತೆ ಪ್ರಿಯಕರನ ಜೊತೆ ಮದುವೆ ಮಾಡುತ್ತಿದ್ದೆವು. ಆದರೆ ಪ್ರಿಯಕರನ ಸ್ನೇಹಿತರು ಈ ರೀತಿ ದೌರ್ಜನ್ಯ ಎಸಗಿದ್ದು, ಅವರ ಮೇಲೆ‌ ಕಠಿಣ ಶಿಕ್ಷೆಯಾಗಬೇಕು” ಎಂದು ಬಾಲಕಿಯ ತಾಯಿ ಒತ್ತಾಯಿಸಿದ್ದಾರೆ.

ಘಟನೆ ನಂತರ ಹಿರಿಯರಾದ ಲಕ್ಷ್ಮಣ ಕಬನೂರ ಮತ್ತು ಮಾರುತಿ ಶಿಗಟ್ಟಿ ಪಂಚಾಯಿತಿ ಮಾಡಲು ಮುಂದಾಗಿದ್ದರು. ಪೊಲೀಸರು, ಇದೀಗ ಪ್ರಕರಣದಲ್ಲಿ ಐವರು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ. ಬಂಕಾಪುರ ಪಿಎಸ್ಐ ಲಿಂಗರಾಜ್ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ. ಈ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ ಎಸ್​ಪಿ ಹೇಳಿದ್ದಿಷ್ಟು..!
ಬಂಕಾಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಮೂವರು ಜನ ಅಪ್ರಾಪ್ತ ಬಾಲಕಿ ಜೊತೆ ಸಂಬಂಧದಲ್ಲಿದ್ರು. ನಂತರ ಬಾಲಕಿ ಪ್ರಗ್ನೆಂಟ್ ಆಗಿದ್ದರಿಂದ ಅಬಾರ್ಷನ್​ ಕೂಡ ಮಾಡಿಸಿದ್ರು. ​ಇದಕ್ಕೆ ಸಂಬಂಧಪಟ್ಟಂತೆ ಇಬ್ಬರು ಪಂಚಾಯ್ತಿ ಕೂಡ ಮಾಡಿದ್ರು. ಆ ನಂತರ ಬಾಲಕಿಯ ಅಮ್ಮ(ತಾಯಿ) ಬಂದು ಕಂಪ್ಲೇಂಟ್​ ಕೊಟ್ಟಿದ್ದಾರೆ. ಇದನ್ನು ಆಧರಿಸಿ ಬಂಕಾಪುರ ಪೊಲೀಸ್​ ಠಾಣೆಯಲ್ಲಿ 94/25 ಬಿಎನ್​ಎಸ್​ 64/2ಎಂ ಮತ್ತು 251 ಸೆಕ್ಷನ್​ ಅಡಿ ಹಾಗೂ ಪೋಕ್ಸೋ ಕೇಸ್ ದಾಖಲಾಗಿದ್ದು, ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಅಂಶುಕುಮಾರ್​ ಮಾಹಿತಿ ನೀಡಿದ್ರು.

error: Content is protected !!