RCB Fan Death: ಬೆಳಗಾವಿ: ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್-2025 ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರ್ಸಿಬಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಫೈನಲ್ ಮ್ಯಾಚ್ ಮುಗಿದ ಬಳಿಕ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡುವಾಗಲೇ ಈ ದುರಂತ ಸಂಭವಿಸಿದೆ. ಆರ್ಸಿಬಿ ಅಭಿಮಾನಿ ಮಂಜುನಾಥ್ ಈರಪ್ಪ ಕುಂಬಾರ (25) ಮೃತಪಟ್ಟವರು.
ಇದನ್ನೂ ಓದಿ👉 ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!
ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದರು. ಕೂಡಲೇ ಗೆಳೆಯರೆಲ್ಲಾ ಸೇರಿ ಸಮೀಪದ ಮಹಾಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರೊಳಗೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಜುನಾಥ್ಗೆ ಕ್ರಿಕೆಟ್ ಕ್ರೇಜ್ ಬಹಳಷ್ಟಿತ್ತು. ಆರ್ಸಿಬಿ ಎಂದರೆ ಹುಚ್ಚು ಅಭಿಮಾನ. ಫೈನಲ್ ಪಂದ್ಯ ವೀಕ್ಷಣೆಗೆ ಗ್ರಾಮದಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲು ಮಂಜುನಾಥ್ ಅವರೇ ಮುಂದೆ ನಿಂತು ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಓಡಾಡಿದ್ದರು. ಪಟಾಕಿ, ಗುಲಾಲು ಎಲ್ಲವನ್ನು ಖರೀದಿಸಿ ತಂದಿದ್ದರು.
ಇದನ್ನೂ ಓದಿ👉 ಹೆಬ್ಬಾರ್ ಜನ್ಮದಿನ: ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಕೈ ಕಾರ್ಯಕರ್ತರು..!
ಸ್ವತಃ ಕ್ರಿಕೆಟ್ ಆಟಗಾರನಾಗಿದ್ದ ಮಂಜುನಾಥ ‘ಅವರಾದಿ ವಾರಿಯರ್ಸ್’ ಟೀಂ ಕಟ್ಟಿಕೊಂಡು ವಿವಿಧ ಕಡೆಗಳಲ್ಲಿ ಆಯೋಜಿಸುತ್ತಿದ್ದ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ಆರ್ಸಿಬಿ ತಂಡ ಗೆದ್ದು ಐಪಿಎಲ್ ಕಪ್ಗೆ ಮುತ್ತಿಕ್ಕುತ್ತಿದ್ದಂತೆ ಯುವಕರು ಹುಚ್ಚೆದ್ದು ಕುಣಿದರು. ಆ ವೇಳೆ ಮಂಜುನಾಥ್ ಕೂಡ ಮೈಮರೆತು ಹೆಜ್ಜೆ ಹಾಕುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ಆವರಿಸಿದೆ. ಮಂಜುನಾಥ್ಗೆ 6 ತಿಂಗಳ ಹೆಣ್ಣು ಮಗು ಇದ್ದು, ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಮಂಜುನಾಥ್ ಅವರ ಅಂತ್ಯಕ್ರಿಯೆ ಅವರಾದಿ ಗ್ರಾಮದಲ್ಲಿ ಇಂದು ನೆರವೇರಲಿದೆ.