Covid News:
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.
Covide News:
ತೀವ್ರ ಅನಾರೋಗ್ಯ: ಇದೀಗ ಮೃತಪಟ್ಟಿರುವ ವೃದ್ಧ ವ್ಯಕ್ತಿಗೆ ಬಹು ಅಂಗಾಂಗ ವೈಫಲ್ಯದ ಕಾಯಿಲೆ ಇತ್ತು. ಜತೆಗೆ ನ್ಯುಮೋನಿಯಾ ಸಮಸ್ಯೆಯೂ ತೀವ್ರವಾಗಿತ್ತು. ಅಲ್ಲದೆ ಅಂಗಾಂಗ ವೈಫಲ್ಯ, ಸೆಪ್ಟಿಕ್ ಶಾಕ್ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ 2024ರಲ್ಲಿ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆದಿತ್ತು. ಏತನ್ಮಧ್ಯೆ, 2019ರಲ್ಲಿ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆದಿತ್ತು.
ಈ ಸುದ್ದಿನೂ ಓದಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಹೈಪೊಥೈರಾಯಿಡಿಸಂ, ಹೈಪರ್‌ಟೆನ್ಷನ್ ಸೇರಿ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವೈಟ್‌ಫೀಲ್ಡ್ ಆಸ್ಪತ್ರೆಯೊಂದರಲ್ಲಿ ಮೇ 17ರಂದು ಮೃತಪಟ್ಟಿದ್ದಾರೆ. ಅವರು ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
108 ಪರೀಕ್ಷೆ 38 ಸೋಂಕು ದೃಢ..!
ಈವರೆಗೆ 108 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 38 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಬೆಂಗಳೂರು ನಗರದಲ್ಲಿ 92 ಪರೀಕ್ಷೆ ನಡೆಸಿದ್ದು, 32 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ 1, ಬೆಂಗಳೂರು ಗ್ರಾಮಾಂತರ 1, ದಕ್ಷಿಣ ಕನ್ನಡ 1, ಮೈಸೂರು 2, ವಿಜಯನಗರ 1 ಸೇರಿ ಮೇ 24ರ ವೇಳೆಗೆ ಒಟ್ಟು 38 ಸೋಂಕು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿನೋಮ್ ಸೀಕ್ವೆನ್ಸಿಂಗ್‌ಗೆ ನಿರ್ಧಾರ..!
ಬೆಂಗಳೂರಿನಲ್ಲಿ ಮೃತಪಟ್ಟಿರುವ 84 ವರ್ಷದ ವೃದ್ಧ ವ್ಯಕ್ತಿಗೆ ತಗುಲಿದ್ದ ಕೊರೋನಾ ಸೋಂಕು ರೂಪಾಂತರಿಯೇ ಎಂಬುದು ಖಚಿತಪಟ್ಟಿಲ್ಲ. ಹೀಗಾಗಿ ಸ್ವ್ಯಾಬ್ ಮಾದರಿಯನ್ನು ವೈರಾಣುವಿನ ವಂಶವಾಹಿ ರಚನೆ ಪರೀಕ್ಷೆಗೆ (ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ) ಒಳಪಡಿಸಲು ತೀರ್ಮಾನಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ರೂಪಾಂತರಿ ಕೊರೋನಾದಿಂದ ಉಂಟಾಗಿರುವ ಸಾವೇ ಅಥವಾ ಅಲ್ಲವೇ ಎಂಬುದು ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.