Hescom News; ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆಯ ಅವಧಿಯಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಕಂಡು ಬರಬಹುದಾದ ಯಾವುದೇ ರೀತಿಯ ವ್ಯತ್ಯಯ ಮತ್ತು ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಕುರಿತಂತೆ ಜಿಲ್ಲೆಯ ಹೆಸ್ಕಾಂ ವಿಭಾಗದ ವತಿಯಿಂದ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಮಳೆಗಾಲದ ಸಮಯದಲ್ಲಿ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗುವ ಸಾಧ್ಯತೆಗಳಿರುವುದರಿಂದ ಈಗಾಗಲೇ ಶಿರಸಿ, ದಾಂಡೇಲಿ, ಕಾರವಾರ ಮತ್ತು ಹೊನ್ನಾವರ ಉಪ ವಿಭಾಗಗಳಲ್ಲಿ ವಿದ್ಯುತ್ ತಂತಿಗಳ ಮೇಲಿನ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಶಿರಸಿ ವಿಭಾಗದಲ್ಲಿ 30 ಬ್ಯಾಚ್ ಗಳಲ್ಲಿ 300 ಮಂದಿ ಕಾರ್ಮಿಕರು, ದಾಡೇಲಿ ವಿಭಾಗದಲ್ಲಿ 5 ಬ್ಯಾಚ್ ನಲ್ಲಿ 50, ಕಾರವಾರ ವಿಭಾಗದಲ್ಲಿ 11 ಬ್ಯಾಚ್ ನಲ್ಲಿ 103 , ಹೊನ್ನಾವರದಲ್ಲಿ 18 ಬ್ಯಾಚ್ ನಲ್ಲಿ 144 ಸೇರಿದಂತೆ ಒಟ್ಟು 64 ಬ್ಯಾಚ್ ಗಳಲ್ಲಿ 597 ಗುತ್ತಿಗೆ ಕಾರ್ಮಿಕರನ್ನು ಮಾನ್ಸೂನ್ ಅವಧಿಯಲ್ಲಿ ಕಾರ್ಯನಿರ್ವಹಿಸಲು ನೇಮಿಸಿಕೊಳ್ಳಲಾಗಿದೆ. ಹಾಗೂ 24×7 ಕಾರ್ಯನಿರ್ವಹಿಸಲು 11 ವಾಹನಗಳು 110 ಗ್ಯಾಂಗ್‌ಮನ್‌ಗಳು ಸಿದ್ದವಾಗಿದ್ದು, ಶಿರಸಿಯ 33 ಕೆವಿಯ 1 ಕೇಂದ್ರದಲ್ಲಿ 11 ಮಂದಿ ಗ್ಯಾಂಗ್‌ಮನ್‌ಗಳು, ಕಾರವಾರದ 1 ಕೇಂದ್ರದಲ್ಲಿ 10 , ಹೊನ್ನಾವರದ 1 ಕೇಂದ್ರದಲ್ಲಿ 10 ಮಂದಿ ಸೇರಿದಂತೆ ಒಟ್ಟು 33 ವಾಹನಗಳು ಮತ್ತು 302 ಗ್ಯಾಂಗ್‌ಮನ್‌ಗಳು ಮತ್ತು 89 ಇಂಜಿನಿಯರ್‌ಗಳು, 594 ಮಂದಿ ಕಾರ್ಯನಿರ್ವಹಣಾ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 983 ಖಾಯಂ ಸಿಬ್ಬಂದಿಗಳು ಇಡೀ ಮಾನ್ಸೂನ್ ಅವಧಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಅಲ್ಲದೇ ಮಳೆಗಾಲದಲ್ಲಿ ಸ್ವೀಕೃತವಾಗುವ ದೂರುಗಳನ್ನು ನಿರ್ವಹಿಸಲು 24×7 ಕಾರ್ಯನಿರ್ವಹಿಸುವ ಸೇವಾಕೇಂದ್ರಗಳನ್ನು ತೆರೆಯಲಾಗಿದ್ದು, ತುರ್ತು ಸಂದರ್ಭದಲ್ಲಿ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‌ಗಳು ಲಭ್ಯವಿದ್ದು, ಮಳೆ ಹಾನಿಯಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಸಂಭವಿಸಿದಲ್ಲಿ ಆದಷ್ಟು ಶೀಘ್ರವಾಗಿ ಸಂಪರ್ಕವನ್ನು ಪುನಃ ಆರಂಭಿಸಲು ಪೂರ್ಣ ಸನ್ನದ್ದವಾಗಿದೆ. ಸಾರ್ವಜನಿಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳಿದಲ್ಲಿ ಯಾವುದೇ ಸಂದರ್ಭದಲ್ಲಿ ಹೆಸ್ಕಾಂನ ಉಚಿತ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದಾಗಿದೆ.