ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ ; ಸೋನು ನಿಗಮ್‌ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್‌..!

ಬೆಂಗಳೂರು : ಬಹುಭಾಷಾ ಗಾಯಕ ಸೋನು ನಿಗಮ್‌ ಅವರು ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ತಳುಕು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಗರ ಪೊಲೀಸರಿಗೆ ಅನುಮತಿ ನೀಡಿದೆ.

ಆದರೆ, ಯಾವುದೇ ರೀತಿಯ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಹಾಗೂ ಮುಂದಿನ ವಿಚಾರಣೆವರೆಗೆ ಅಂತಿಮ ವರದಿ ಸಲ್ಲಿಸುವುದಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಹಿನ್ನೆಲೆ ಗಾಯಕ ಸೋನು ನಿಗಮ್‌ ಸಲ್ಲಿಸಿರುವ ಅರ್ಜಿಯನ್ನು ನಾಯಮೂರ್ತಿ ಶಿವಶಂಕರ ಅಮರಣ್ಣವರ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಮುಂದಿನ ವಿಚಾರಣೆವರೆಗೆ ಅಂತಿಮ ವರದಿ ಸಲ್ಲಿಸುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಸೋನು ನಿಗಮ್‌ ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಸರ್ಕಾರ ಯಾವುದೇ ತೆರನಾದ ಬಲವಂತದ ಕ್ರಮಕೈಗೊಳ್ಳಬಾರದು. ಸೋನು ನಿಗಮ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಬಹುದು. ತನಿಖಾಧಿಕಾರಿ ಖುದ್ದು ಹೇಳಿಕೆ ದಾಖಲಿಸಲು ಸೋನು ನಿಗಮ್‌ ಸ್ಥಳಕ್ಕೆ ತೆರಳಿದರೆ ಅದರ ವೆಚ್ಚವನ್ನು ಅವರೇ ಭರಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಸೋನು ನಿಗಮ್‌ ಪರ ವಕೀಲ ಧನಂಜಯ ವಿದ್ಯಾಪತಿ ಅವರು “ಸೋನು ನಿಗಮ್‌ ಹೇಳಿಕೆ ನೀಡಿದಾಗ ದೂರುದಾರರು ಸ್ಥಳದಲ್ಲಿ ಇರಲಿಲ್ಲ. ಸಾಮಾಜಿಕ ಮಾಧ್ಯಮ ನೋಡಿ, ಪ್ರಚಾರಕ್ಕಾಗಿ ದೂರು ದಾಖಲಿಸಲಾಗಿದೆ. ಅವರ ವಿರುದ್ಧ ಅನ್ವಯಿಸಿರುವ ಸೆಕ್ಷನ್‌ಗೂ ದೂರಿಗೂ ಸಂಬಂಧವೇ ಇಲ್ಲ. ದ್ವೇಷ ಹರಡುವ ಉದ್ದೇಶದಿಂದ ಸೋನು ನಿಗಮ್‌ ಹೇಳಿಕೆ ನೀಡಿಲ್ಲ.

ಸೋನು ನಿಗಮ್‌ ಅವರು ತಾರೆಯಾಗಿದ್ದು, ಇದು ಪ್ರಚಾರದ ವಿಷಯವಾಗಿರುವುದರಿಂದ ಅಂಚೆ ಮೂಲಕ ಅಥವಾ ಬೇರೆ ವಿಧಾನದ ಮೂಲಕ ಹೇಳಿಕೆ ನೀಡಲು ಅನುಮತಿಸಬೇಕು ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ “ಸೋನು ನಿಗಮ್‌ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಲೈವ್‌ ಇತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ನೀಡಿರುವ ಹೇಳಿಕೆ ಕ್ಲಿಪ್‌ ಹರಿದಾಡಿದೆ. ಸೋನು ನಿಗಮ್‌ ಘನತೆ ಹೊಂದಿರುವ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ, ಜನರು ಒಂದು ಹಾಡು ಹಾಡಲು ಕೇಳಿದ್ದಕ್ಕೆ ಈ ರೀತಿ ಹೇಳಿದ್ದಾರೆ. ಅದನ್ನು ಪಹಲ್ಗಾಮ್‌ ಘಟನೆಗೆ ಹೋಲಿಕೆ ಮಾಡಬೇಕಿರಲಿಲ್ಲ ಎಂದು ವಾದಿಸಿದರು.

“ಸೋನು ನಿಗಮ್‌ ಉದ್ದೇಶ ಸರಿಯೋ-ತಪ್ಪೋ ಎಂಬುದನ್ನು ಅರಿಯಬೇಕಿದೆ. ಮೇ 5ರಂದು ಇಮೇಲ್‌ ಮತ್ತು ರಿಜಿಸ್ಟರ್‌ ಅಂಚೆ ಮೂಲಕ ಪೊಲೀಸ್‌ ನೋಟಿಸ್‌ ಕಳುಹಿಸಲಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದ ಮೇಲೆ ಸೋನು ನಿಗಮ್‌ ಕ್ಷಮೆ ಕೋರಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ನೋಟಿಸ್‌ ನೀಡಿದ ಬಳಿಕ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಿತ್ತು. ಕಾನೂನು ಗೌರವಿಸದ ವ್ಯಕ್ತಿಗೆ ಅನುಕೂಲ ಕಲ್ಪಿಸಬಾರದು” ಎಂದರು.

ಈ ನಡುವೆ, ಪೀಠವು “ಸೋನು ನಿಗಮ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬಹುದೇ? ಅವರ ಖುದ್ದು ಹಾಜರಾತಿ ಏಕೆ? ವಿ ಸಿಯ ಮೂಲಕ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬಹುದಲ್ಲವೇ? ಇಲ್ಲವಾದಲ್ಲಿ ಅವರ ಸ್ಥಳಕ್ಕೆ ಹೋಗಿ ಹೇಳಿಕೆ ದಾಖಲಿಸಿಕೊಳ್ಳಬಹುದು. ಸೋನು ನಿಗಮ್‌ ಸಾಮಾನ್ಯ ವ್ಯಕ್ತಿಯಲ್ಲ” ಎಂದು ಹೇಳಿತು.

error: Content is protected !!