ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ..!

ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ(BBMP) ಸ್ವಾಧೀನಾನುಭವ ಪ್ರಮಾಣ ಪತ್ರ( Occupancy certificates) ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಈ ಕುರಿತು ಬಿಬಿಎಂಪಿ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಬೆಂಗಳೂರಿನಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಕೋರಿ ಸುಮಾರು 66,400 ಅರ್ಜಿಗಳು ಬಂದಿವೆ. ಸುಪ್ರೀಂ ಕೋರ್ಟ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಡಿರುವ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು / ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಪ್ರಿಂಕೋರ್ಟ್ ಆದೇಶ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ, ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ, ಸಲ್ಲಿಸುವ ವಿವರಗಳನ್ನು ಪಡೆಯಲು ಬಿಬಿಎಂಪಿಯಿಂದ ಎಸ್​​ಎಂಎಸ್​ ಮತ್ತು ದೂರವಾಣಿ ಕರೆ ಮುಖಾಂತರ ವಿದ್ಯುತ್ ಸಂಪರ್ಕಕ್ಕಾಗಿ ಬಾಕಿ ಇರುವ ಅರ್ಜಿದಾರರನ್ನು ಸಂಪರ್ಕಿಸಲಾಗುತ್ತದೆ.

ಅಲ್ಲದೇ ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಲು ಹಾಗೂ ಈ ಕೆಳಕಂಡ ಆನ್ಲೈನ್ ಲಿಂಕ್ ನಲ್ಲಿ ನೊಂದಾಯಿತ ಇಂಜಿನಿಯರ್‌(Architect/ Engineer)ಗಳ ಮುಖಾಂತರ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಬೆಂಗಳೂರು ಸಾರ್ವಜನಿಕರನ್ನು ಕೋರಿದ್ದಾರೆ.

ಇದಕ್ಕಾಗಿ ಕಟ್ಟಡ ಮಾಲೀಕರು https://bpas.bbmpgov.in/BPAMSClient4/Default.aspx ಗೆ ಭೇಟಿ ನೀಡಬಹುದು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದಿನಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority) ಜಾರಿಗೆ ಬಂದಿದೆ.

error: Content is protected !!