ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ‌ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!

ಪಹಲ್ಗಾಮ್‌ ದಾಳಿ ಬಳಿಕ ಭಾರತ-ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನತೆ ನಡುವೆಯೇ ನೆರೆ ದೇಶಕ್ಕೆ ತಕ್ಕ ತಿರುಗೇಟು ನೀಡಲು ಭಾರತ ರಣಕಹಳೆ ಮೊಳಗಿಸಿದೆ. ಪಾಕ್‌ ಮೇಲೆ ದಾಳಿಗೆ ಸನ್ನದ್ಧವಾಗುತ್ತಿರುವ ಸೂಚನೆ ನೀಡಿದೆ. ಮೇ 7ರಂದು ಭದ್ರತಾ ಅಣಕು ಕವಾಯತು ನಡೆಸುವಂತೆ (ಸೆಕ್ಯೂರಿಟಿ ಮಾಕ್‌ ಡ್ರಿಲ್‌) ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೋಮವಾರ (ಮೇ 6) ನಿರ್ದೇಶನ ನೀಡಿದೆ. 1971ರಲ್ಲಿ ಭಾರತ-ಪಾಕ್‌ ಯುದ್ಧದ ಬಳಿಕ ಇಂತಹ ಅಣಕು ಕವಾಯತಿಗೆ ಇದೇ ಮೊದಲ ಬಾರಿಗೆ ಸೂಚಿಸಲಾಗಿದೆ.

ಕಾಶ್ಲೀರದ ಪಹಲ್ಗಾಮ್‌ನಲ್ಲಿ ಏ.22ರಂದು ನಡೆದ ಉಗ್ರ ದಾಳಿ ಬಳಿಕ ಪಾಕಿಸ್ತಾನ ಸತತ 11 ದಿನಗಳಿಂದ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮೂಲಕ ಭಾರತವನ್ನು ಕೆಣಕುತ್ತಿದೆ. ಮತ್ತೊಂದೆಡೆ, ಉಗ್ರರು ಕನಸಿನಲ್ಲೂ ಊಹಿಸಿರದಂತಹ ತಿರುಗೇಟು ನೀಡುವುದಾಗಿ ಭಾರತ ಶಪಥ ಮಾಡಿದೆ. ಈ ಬೆಳವಣಿಗೆಗಳನ ನಡುವೆಯೇ ಕೇಂದ್ರ ಸರಕಾರ ಯುದ್ಧದ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆಯ ಅಣುಕು ಕವಾಯತು ನಡೆಸುವಂತೆ ರಾಜ್ಯಗಳಿಗೆ ಸೂಚಿಸಿರುವುದು ಮಹತ್ವ ಪಡೆದುಕೊಂಡಿದೆ.

ಮಾಕ್‌ ಡ್ರಿಲ್‌ಗೆ ಭಾರತ ಸಜ್ಜು
ಭಾರತವು ಮೇ 7 ರಂದು ರಾಷ್ಟ್ರವ್ಯಾಪಿ ರಕ್ಷಣಾ ಕಾರ್ಯಾಚರಣೆಯ ಅಣುಕು ಕವಾಯತು ನಡೆಸಲು ಸಜ್ಜಾಗಿದೆ. ಕೇಂದ್ರ ಗೃಹ ಸಚಿವಾಲಯವು (MHA) ದೇಶಾದ್ಯಂತ 244 ಜಿಲ್ಲೆಗಳಲ್ಲಿ ಈ ಡ್ರಿಲ್ ಅನ್ನು ನಡೆಸಲು ಸೂಚಿಸಿದೆ. ಯುದ್ಧದ ಸನ್ನಿವೇಶಗಳನ್ನು ಅನುಕರಿಸುವುದು ಇದರ ಉದ್ದೇಶವಾಗಿದೆ. ಬ್ಲ್ಯಾಕೌಟ್, ಏರ್ ರೈಡ್ ಸೈರನ್‌ಗಳು ಮತ್ತು ಸ್ಥಳಾಂತರಿಸುವ ವಿಧಾನಗಳನ್ನು ಇದರಲ್ಲಿ ಪರೀಕ್ಷಿಸಲಾಗುತ್ತದೆ. ಸ್ವಯಂಸೇವಕರಿಗೆ ತರಬೇತಿ ನೀಡುವುದು, ಸ್ಥಳೀಯ ಪ್ರತಿಕ್ರಿಯೆಗಳನ್ನು ನಿರ್ವಹಿಸುವುದು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ನಾಗರಿಕ ಮತ್ತು ಭದ್ರತಾ ಪಡೆಗಳ ನಡುವೆ ಸಮನ್ವಯವನ್ನು ಖಚಿತಪಡಿಸುವುದು ಈ ಜಿಲ್ಲೆಗಳ ಮುಖ್ಯ ಕೆಲಸವಾಗಿದೆ.

ಭಾರತದಲ್ಲಿ ನಾಗರಿಕ ರಕ್ಷಣಾ ಜಿಲ್ಲೆಗಳು ಯಾವುವು?
ನಾಗರಿಕ ರಕ್ಷಣಾ ಜಿಲ್ಲೆಗಳು ಎಂದರೆ ಸರ್ಕಾರವು ನಾಗರಿಕ ರಕ್ಷಣಾ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುವ ಪ್ರದೇಶಗಳು. ಯುದ್ಧಗಳು, ವೈಮಾನಿಕ ದಾಳಿಗಳು, ಕ್ಷಿಪಣಿ ದಾಳಿಗಳು ಅಥವಾ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗಳಂತಹ ತುರ್ತು ಸಂದರ್ಭಗಳಲ್ಲಿ ಈ ಜಿಲ್ಲೆಗಳು ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಸಂಪನ್ಮೂಲಗಳನ್ನು ಸಂಘಟಿಸುವುದು, ನಾಗರಿಕರು ಮತ್ತು ಸ್ವಯಂಸೇವಕರಿಗೆ ತರಬೇತಿ ನೀಡುವುದು ಮತ್ತು ಬಹು ಸರ್ಕಾರಿ ಮತ್ತು ನಾಗರಿಕ ಏಜೆನ್ಸಿಗಳನ್ನು ಒಳಗೊಂಡ ಪ್ರತಿಕ್ರಿಯೆಗಳನ್ನು ಸಂಘಟಿಸುವುದು ಇವುಗಳ ಜವಾಬ್ದಾರಿಯಾಗಿದೆ.

ಮಾಕ್ ಡ್ರಿಲ್ ಎಂದರೇನು?
ರಕ್ಷಣಾ ಕಾರ್ಯಾಚರಣೆಯ ಅಣುಕು ಕವಾಯತು ಎಂದರೆ ವೈಮಾನಿಕ ದಾಳಿ ಅಥವಾ ಕ್ಷಿಪಣಿ ದಾಳಿಯಂತಹ ತುರ್ತು ಸನ್ನಿವೇಶಗಳ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರು ಮತ್ತು ಸರ್ಕಾರದ ಸಿದ್ಧತೆಯನ್ನು ಪರೀಕ್ಷಿಸುವುದು ಮತ್ತು ಸುಧಾರಿಸುವುದಾಗಿದೆ. ಈ ಡ್ರಿಲ್‌ಗಳನ್ನು ನಾಗರಿಕ ರಕ್ಷಣಾ ನಿಯಮಗಳು, 1968 ರ ಅಡಿಯಲ್ಲಿ ನಡೆಸಲಾಗುತ್ತದೆ. ಮುಖ್ಯವಾಗಿ ನಾಗರಿಕರಲ್ಲಿರುವ ಆತಂಕವನ್ನು ಕಡಿಮೆ ಮಾಡಲು, ಪ್ರತಿಕ್ರಿಯೆ ಕೊರತೆಗಳನ್ನು ಗುರುತಿಸಲು, ಸ್ವಯಂಸೇವಕರು ಮತ್ತು ಪ್ರತಿಕ್ರಿಯೆ ನೀಡುವವರಿಗೆ ತರಬೇತಿ ನೀಡಲು ಮತ್ತು ಜಾಗೃತಿ ನಿರ್ಮಿಸಲು ಸಹಾಯ ಮಾಡುತ್ತವೆ.

 

error: Content is protected !!