ಶಿರಸಿ: ಮಾನವ ಮತ್ತು ಜೀವ ಸಂಕುಲದ ಏಕೈಕ ಆವಾಸ ಸ್ಥಾನವಾಗಿರುವ ಭೂಮಿ ಮತ್ತು ಇಲ್ಲಿನ ಪ್ರಕೃತಿ ಸಂಪತ್ತನ್ನು ಸಂರಕ್ಷಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಯೋಧರಾಗಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಅವರು ಸೋಮವಾರ ಶಿರಸಿಯ ಅರಣ್ಯ ಕಾಲೇಜು ಆವರಣದಲ್ಲಿ ‘ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ’ ವಿಷಯದ ಕುರಿತಾಗಿ ಅರಣ್ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಪ್ರಕೃತಿಯು ನಮಗೆ ಎಲ್ಲವನ್ನು ನೀಡಿದೆ ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳದೆ ನಮ್ಮ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು, ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ಪ್ರಕೃತಿಯು ಮಾನವನಿಗೆ ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳು ಮರ ಗಿಡಗಳು ಸೇರಿದಂತೆ ಎಲ್ಲಾ ಜೀವ ಸಂಕುಲಕ್ಕೆ ಸೇರಿದೆ , ಇಂದಿನ ಯುವ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತ, ಮುಂದಿನ ಪೀಳಿಗೆಗೂ ಅರಿವು ಮೂಡಿಸಬೇಕು ಎಂದರು.
ನಮ್ಮ ದೇಶದಲ್ಲಿ ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಒಟ್ಟಾಗಿ ಸಾಗಿದೆ. ಭಾರತವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಗಿತ್ತು. ಪರಿಸರದೊಂದಿಗೆ ಬದುಕುವ ಕಲೆಯನ್ನು ಪೂರ್ವಜರು ಕರಗತ ಮಾಡಿಕೊಂಡಿದ್ದರು ಎಂದರು.
ಪರಿಸರ ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ನಡೆಸುವ ಬದಲು ಪ್ರಾಕೃತಿಕ ಸೌಹಾರ್ದ ಕಾಪಾಡುವ ತುರ್ತು ಅಗತ್ಯವಿದೆ. ಪಶ್ಚಿಮ ಘಟ್ಟ ಪ್ರದೇಶವು ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಗೋಡೆಯ ನಡುವೆ ಕಲಿಯುವುದಕ್ಕಿಂತ ವಿಸ್ತಾರ ಪ್ರದೇಶದಲ್ಲಿ ಕಲಿಯಬಹುದು ಎಂದರು.
ಅರಣ್ಯವು ಶ್ವಾಸಕೋಶದಂತೆ, ಶ್ವಾಸಕೋಶ ಸರಿಯಾಗಿದ್ದರೆ ಉಸಿರಾಡಬಹುದು. ಜಾಗತಿಕ ತಾಪಮಾನ ಏರಿಕೆಯು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮೆ ನೀಡಲಾರಳು ಎಂದು ಎಚ್ಚರಿಸಿದರು.
ಸಸಿ ನಾಟಿ ಮಾಡುವುದೇ ಅರಣ್ಯ ರಕ್ಷಣೆಯಲ್ಲ. ಸಸ್ಯ ಸಂಪತ್ತು, ಜೀವಿಗಳ ಉಳಿವು, ಗಾಳಿ, ನೀರಿನ ಸಂರಕ್ಷಣೆ ಅಗತ್ಯವಿದೆ. ಗಾಳಿ, ನೀರು ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯ. ಈ ಕಾರಣದಿಂದಲೇ ಪೂರ್ವಜರು ನೀರು ಮತ್ತು ಗಾಳಿಯನ್ನು ದೇವರಂತೆ ಪೂಜಿಸಿದ್ದರು. ಪ್ರತಿಯೊಬ್ಬರೂ ತಮ್ಮ ತಾಯಿಯ ನೆನಪಿನಲ್ಲಿ ಕನಿಷ್ಠ ಒಂದು ಗಿಡ ನೆಡಬೇಕು ಎಂದರು.
ಪ್ರಸ್ತುತ ಸುಸ್ಥಿರ ಪರಿಸರದ ಅಭಿವೃದ್ಧಿ ಆಗಬೇಕಿದೆ, ಯುವಜನತೆ ಪ್ರಕೃತಿ ವಿನಾಶದ ಪರಿಣಾಮಗಳ ಬಗ್ಗೆ ಅರಿತು, ಅವುಗಳನ್ನು ತಡೆಯುವುದರ ಜೊತೆಗೆ ಅದರ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು, ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು ಜೀವನದ ಉತ್ತಮ ಹಾದಿಯಲ್ಲಿ ನಡೆಯಬೇಕು. ಕಳೆದ ದಶಕದಿಂದ ಭಾರತ ಆರ್ಥಿಕವಾಗಿ ಹೆಚ್ಚಿನ ಬೆಳವಣಿಗೆ ಹೊಂದಿದೆ. ಈ ಬೆಳವಣಿಗೆಯಿಂದ ಇಡೀ ಜಗತ್ತಿನ ದೃಷ್ಟಿ ನಮ್ಮ ಮೇಲಿದೆ. ನಮ್ಮ ದೇಶದ ಯುವಶಕ್ತಿ ಜಗತ್ತಿನ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂಸತ್ ಭವನದಲ್ಲಿ ಸಂವಾದ ನಡೆಸುವುದಾಗಿ ಉಪ ರಾಷ್ಟ್ರಪತಿಗಳು ಘೋಷಿಸಿದರು.
ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಅವರ ಪತ್ನಿ ಸುದೇಶ ಧನಕರ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್.ಪಾಟೀಲ ಇದ್ದರು. ಅರಣ್ಯ ಕಾಲೇಜಿನ ಡೀನ್ ಆರ್.ವಾಸುದೇವ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾಲೇಜಿನ ಆವರಣದಲ್ಲಿ ಉಪ ರಾಷ್ಟçಪತಿ ಅವರು ತಮ್ಮ ತಾಯಿ ಕೇಸರಿ ದೇವಿ ಹೆಸರಿನಲ್ಲಿ, ಅವರ ಪತ್ನಿ ಸುದೇಶ ಧನಕರ್ ಅವರು ತಮ್ಮ ತಾಯಿ ಭಗವತಿ ದೇವಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಮ್ಮ ತಾಯಿ ಸುಮನ್ ಬಾಯಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.