ಕಾರವಾರ: ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ನಾಲ್ಕು ಪ್ರಶಸ್ತಿಗಳು ಲಭಿಸಿವೆ ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ಯ ರವರು ಹರ್ಷ ವ್ಯಕ್ತಪಡಿಸಿದ್ದಾರೆ.
2024-25 ಆರ್ಥಿಕ ವರ್ಷದಲ್ಲಿ ನಿವ್ವಳ ಖಾತೆಗಳ ಸಂಖ್ಯೆಯ ವಿಭಾಗದಲ್ಲಿ ಹಾಗೂ ಅಂಚೆ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಯನ್ನು ತೆರೆಯುವ ವಿಭಾಗದಲ್ಲಿ ಕಾರವಾರ ಅಂಚೆ ವಿಭಾಗ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಅಂಚೆ ಕಚೇರಿ ಉಳಿತಾಯ ಯೋಜನೆಯ ವಿವಿಧ ಹೊಸ ಖಾತೆಗಳನ್ನು ತೆರೆಯುವ ಉಪ ಅಂಚೆ ಕಚೇರಿಗಳ ವಿಭಾಗದಲ್ಲಿ ಹೊನ್ನಾವರ ಅಂಚೆ ಕಚೇರಿಯ ಅಂಚೆ ಪಾಲಕ ಎಮ್.ಎಸ್. ಗೊಂಡ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಕಾರವಾರ ವಿಭಾಗಕ್ಕೆ ಒಟ್ಟು 39,872 ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ತೆರೆಯುವ ಗುರಿಗಳನ್ನು ನೀಡಲಾಗಿದ್ದು, ಎಲ್ಲಾ ಅಂಚೆ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ 88,331 ಸಣ್ಣ ಉಳಿತಾಯ ಖಾತೆಗಳನ್ನು ತೆರೆದು ಗುರಿಯನ್ನು ದಾಟಿ ಶೇಕಡಾ 221.54% ಗುರಿ ಸಾಧಿಸಿ ಕರ್ನಾಟಕ ವೃತ್ತ ಮಟ್ಟದಲ್ಲಿ ದ್ವಿತೀಯ ಸ್ಥಾನ ಕಳೆದುಕೊಂಡಿದೆ ಮತ್ತು ನಿವ್ವಳ ಖಾತೆಗಳ ಸಂಖ್ಯೆಯ ವಿಭಾಗದಲ್ಲಿ ಒಟ್ಟು 25,910 ಉಳಿತಾಯ ಯೋಜನೆಗಳನ್ನು ಸೇರ್ಪಡೆ ಮಾಡುವ ಗುರಿಯನ್ನು ನಿಗಧಿ ಮಾಡಲಾಗಿದ್ದು, ಇದರಲ್ಲಿ ಕಾರವಾರ ವಿಭಾಗವು 54,291 ಖಾತೆಗಳನ್ನು ತೆರೆದು ಗುರಿಯನ್ನು ದಾಟಿ ಶೇಕಡಾ 197.95% ಗುರಿ ಸಾಧಿಸಿದೆ.
ಇದರ ಜೊತೆಗೆ ಗ್ರಾಮೀಣ ಅಂಚೆ ಜೀವ ವಿಮಾ ಕ್ಷೇತ್ರದ ಅಧಿಕಾರಿಗಳ ವಿಭಾಗದಲ್ಲಿ ನಾರಾಯಣ ದೇವಾಡಿಗ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾಧನೆ ತೋರಿದ ಸಾಧಕರಿಗೆಲ್ಲ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಏ.29 ರಂದು ನಡೆದ ಉನ್ನತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಕರ್ನಾಟಕ ವೃತ್ತದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ ವಿತರಿಸಿದ್ದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪಿ.ಎಂ.ಜಿ ಕರ್ನಲ್ ಸುಶೀಲ್ ಕುಮಾರ್, ಕರ್ನಾಟಕ ವೃತ್ತದ ಅಂಚೆ ನಿರ್ದೇಶಕ ಸಂದೇಶ ಮಹಾದೇವಪ್ಪ, ಬೆಂಗಳೂರು ವಲಯ ಅಂಚೆ ನಿರ್ದೇಶಕಿ ವಿ.ತಾರ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ ಅಪಘಾತ ವಿಮೆ, ವಾಹನ ವಿಮೆ, ಆರೋಗ್ಯ ವಿಮೆ, ಇತ್ಯಾದಿ ಜನೋಪಯೋಗಿ ಯೋಜನೆಗಳಿಗೆ ಎಲ್ಲಾ ವಯೋಮಾನದವರು ಸಮೀಪದ ಅಂಚೆ ಕಚೇರಿಗೆ ಸಂಪರ್ಕಿಸಬೇಕಾಗಿ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.