ಮುಂಡಗೋಡ: ಸಿ.ಇ.ಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯದ ಒಬ್ಬ ವಿದ್ಯಾರ್ಥಿಯನ್ನು ಆತ ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಪ್ರವೇಶ ನೀಡಿರುವುದನ್ನು ಹಾಗೂ ಬೀದರನಲ್ಲಿ ವಿದ್ಯಾರ್ಥಿ ಜನಿವಾರ ಧರಿಸಿದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡದ ಘಟನೆಯನ್ನು ಶಾಸಕ ಶಿವರಾಮ್ ಹೆಬ್ಬಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಖಂಡಿಸಿರೊ ಅವ್ರು, ಈ ದೇಶವು ವಿವಿಧ ಧರ್ಮ, ಸಂಪ್ರದಾಯ, ಧಾರ್ಮಿಕ ಚಿಹ್ನೆ, ಆಚರಣೆಗಳ ಗೌರವವನ್ನು ಮೂಲಭೂತ ಹಕ್ಕಾಗಿ ಪರಿಗಣಿಸುತ್ತದೆ. ವಿದ್ಯಾರ್ಥಿಯ ಧಾರ್ಮಿಕ ಗುರುತಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡದ್ದು ಸಂವಿಧಾನಾತ್ಮಕ ಮೌಲ್ಯಗಳ ವಿರೋಧವಾಗಿದೆ.
ನಾನು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಧಾರ್ಮಿಕ ಗೌರವವನ್ನು ಕಾಪಾಡಬೇಕು, ಅವರು ಬೆಳೆದ ಸಂಸ್ಕೃತಿಯನ್ನು ಗೌರವಿಸಬೇಕು. ಯಾವುದೇ ರೂಪದ ಜಾತಿ ಅಥವಾ ಧಾರ್ಮಿಕ ಭೇದಭಾವ ಶಿಕ್ಷಣ ಕ್ಷೇತ್ರಕ್ಕೆ ಗೌರವ ನೀಡುವುದಿಲ್ಲ.
ಸರಕಾರ ತಕ್ಷಣ ಈ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಪರೀಕ್ಷಾಧಿಕಾರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿಗೆ ಮರು ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿರೋ ಹೆಬ್ಬಾರ್, ಸಮಾಜದಲ್ಲಿ ಎಲ್ಲರಿಗೂ ಸಮಾನ ಗೌರವ, ಮಾನವೀಯತೆ ಹಾಗೂ ಸಂವಿಧಾನಬದ್ಧ ಹಕ್ಕುಗಳಿರಬೇಕು ಎಂಬುದನ್ನು ಮರೆಯಬಾರದು.
ನಾನು ಈ ವಿಷಯವನ್ನು ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಎತ್ತಿಹಿಡಿಯಲು ಸಿದ್ಧನಿದ್ದೇನೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ವ್ಯವಸ್ಥೆಯ ಪುನರ್ ಪರಿಶೀಲನೆಯ ಅಗತ್ಯವಿದೆ ಅಂತಾ
ಶಿವರಾಮ ಹೆಬ್ಬಾರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.