ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಶನಿವಾರ ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಜಾತಿ ತಾನೊಂದೆ ವಲಂ ಎಂದ ಕನ್ನಡದ ಆದಿ ಕವಿ ಪಂಪ ನ ನೆನಪಿನಲ್ಲಿ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡುವ ಕುರಿತಂತೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಕೆಯಾದಲ್ಲಿ ಈ ಬಗ್ಗೆ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬನವಾಸಿಯಲ್ಲಿ ಪಂಪ ವನ ಅಭಿವೃದ್ಧಿಗಾಗಿ 50 ಲಕ್ಷ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕದಂಬ ಉತ್ಸವಕ್ಕೆ ಪ್ರತಿ ವರ್ಷ 2 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಜಿಲ್ಲೆಯ ಕರಾವಳಿ ಉತ್ಸವಕ್ಕೆ 5 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದ ಆಡಳಿತದಲ್ಲಿ ಕದಂಬರ ಜನೋಪಯೋಗೀ ಆಡಳಿತ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಕಲೆ ಸಾಹಿತ್ಯ ಸಂಸ್ಕತಿಯ ಬೆಳವಣಿಗೆಗೆ ಸರ್ಕಾರ ಸದಾ ಪ್ರೋತ್ಸಾಹ ನೀಡುತ್ತಿದ್ದು ಜನೋಪಾಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.
ಬನವಾಸಿ ಮತ್ತು ಶಿರಸಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಹಾಸ್ಟೆಲ್ ನಿರ್ಮಾಣ ಮಾಡಲಾಗುವುದು ಎಂದರು.
ಪಂಪ ಪ್ರಶಸ್ತಿ ಸ್ವೀಕರಿಸಿದ ಡಾ. ಬಿ. ಎ. ವಿವೇಕ ರೈ ಮಾತನಾಡಿ, ಪಂಪ ಪ್ರಶಸ್ತಿ ನನ್ನ ಪಾಲಿಗೆ ಮಹತ್ವದ್ದು, ಈ ಪ್ರಶಸ್ತಿಯನ್ನು ನಾನು ಕನಸಿನಲ್ಲಿಯೂ ನೆನೆಸಿರಲಿಲ್ಲ, ಪ್ರಶಸ್ತಿ ಮೂಲಕ ಕನ್ನಡಿಗರ ಪ್ರೀತಿ ನನ್ನ ಮೇಲೆ ಧಾರೆಯೆರೆದಂತಾಗಿದೆ, ಪುಣ್ಯಕ್ಷೆತ್ರ ಬನವಾಸಿಯಲ್ಲಿ ಇದನ್ನು ಪಡೆದದ್ದು ನನ್ನ ಪುಣ್ಯ. ಬನವಾಸಿಯು ಬಹು ಸಂಸ್ಕೃತಿಯ ತಾಣ, ಧರ್ಮದ ನೆಲೆಯಾಗಿದೆ.
ಬನವಾಸಿ ಯಲ್ಲಿ ಪಂಪ ತಿಳಿಸಿದಂತೆ ಮಾವು ಮಲ್ಲಿಗೆ ಯ ಕಂಪು ಹರಡುವಂತೆ ಇಲ್ಲಿ ಆ ಗಿಡಗಳನ್ನು
ನೆಡುವಂತಾಗವೇಕು. ಪಂಪನ ಹೆಸರು ಶಾಶ್ವತವಾಗುವಂತೆ ಇಲ್ಲಿ ಪಂಪ ಭವನ ನಿರ್ಮಾಣವಾಗಬೇಕು. ಅದರಲ್ಲಿ ಪಂಪನ ಕಾವ್ಯಗಳನ್ನು ಬರೆಸಬೇಕು, ಅವರ ಎಲ್ಲಾ ಕೃತಿಗಳು ಹಾಗೂ ಪಂಪನ ಕುರಿತ ಸಂಶೋಧನ ಗ್ರಂಥಗಳು ಹಾಗೂ ಭಾಷಣಗಳ ದಾಖಲೆಗಳನ್ನು ಇಡಬೇಕು, ಪಂಪ, ಬಸವಣ್ಣ,ಕನಕದಾಸರು ಮತ್ತು ಕುವೆಂಪು ಎಲ್ಲಾರಿಗೂ ಆದರ್ಶವಾಗಬೇಕು ಎಂದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ವಿಶೇಷತೆಯಲ್ಲಿ ಏಕತೆ ಇರುವ ಜಿಲ್ಲೆಯಾಗಿದ್ದು ಇಲ್ಲಿ ಕಲೆ, ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಇಲ್ಲಿ ಕನ್ನಡದ ಪ್ರಥಮ ರಾಜವಂಶ ಕದಂಬರ ಆಳ್ವಿಕೆಯಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಆಪಾರ ಕೊಡುಗೆ ನೀಡಿದ್ದಾರೆ, ಕದಂಬೊತ್ಸವದ ಮೂಲಕ ಕದಂಬರ ಕೊಡುಗೆಯನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಲಾಗುತ್ತಿದೆ ಎಂದರು.
ಆಡಳಿತ ಸುಧಾರಣಾ
ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ ಮಾತನಾಡಿ, ಕದಂಬ ಉತ್ಸವ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ನಡೆಯಲಿದೆ ಎಂದರು.
ಯಲ್ಲಾಪುರ- ಮುಂಡಗೋಡ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಮಾತನಾಡಿ ಆದಿ ಕವಿ ಪಂಪ ಬನವಾಸಿಯನ್ನು ಸುದೀರ್ಘ ವಾಗಿ ವರ್ಣಿಸಿದ್ದಾರೆ. 450 ವರ್ಷಗಳ ಹಿಂದಿ ನಿರ್ಮಾಣಗೊಂಡು, ಜಿರ್ಣಾವ್ಯವಸ್ಥೆಯಲ್ಲಿದ್ದ
ರಥವನ್ನು 4.5 ಕೋಟಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಹೊಸ ರಥವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಪಂಪ ಪ್ರಶಸ್ತಿ ಈ ಬಾರಿ ಬನವಾಸಿಯಲ್ಲೇ ನೀಡುವ ಮೂಲಕ ಸರ್ಕಾರ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಿದೆ. ಪಂಪ ಭವನ ನಿರ್ಮಾಣ ಮಾಡುವ ಕುರಿತು ನನ್ನ ಬೆಂಬಲವಿದೆ. 4 ವರ್ಷಗಳ ಹಿಂದೆ 100 ವಿದ್ಯಾರ್ಥಿ ಸಾಮರ್ಥ್ಯದ ಹೆಣ್ಣುಮಕ್ಕಳ ವಸತಿ ನಿಲಯ ಮಂಜೂರಾಗಿದ್ದು, ಈ ವಸತಿ ನಿಲಯಕ್ಕೆ ಕಟ್ಟಡ ನಿರ್ಮಾಣ ಮಾಡುವ ಮೂಲಕ ಈ ಭಾಗದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಭದ್ರತೆ ವ್ಯವಸ್ಥೆಯಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಸತೀಶ ಕೆ. ಸೈಲ್, ಶಾಸಕ ಭೀಮಣ್ಣ ಟಿ. ನಾಯ್ಕ, ವಿಧಾನ ಪರಿಷತ್ ಶಾಸಕರಾದ ಶಾಂತಾರಾಮ ಬುಡ್ನ ಸಿದ್ದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಕೆ. ಎಂ,
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ, ಬನವಾಸಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿಬಿ ಆಯಿಷಾ ಖಾಸಿಂ ಖಾನ್, ಗುಡ್ನಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲಾ ಸಂತೋಷ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.