ಭೂ ದಾಖಲೆಗಳು ಕಂದಾಯ ಆಡಳಿತದ ಮುಖ್ಯ ಭಾಗವಾಗಿದ್ದು, ಅನೇಕ ದಶಕಗಳವರೆಗೆ ಇರುವ ಭೂ ದಾಖಲೆಗಳು ಒಂದು ನಿರ್ದಿಷ್ಟ ಭೂಮಿಯ ಮೇಲೆ ನಡೆದ ವ್ಯವಹಾರಗಳ ಇತಿಹಾಸದ ಪ್ರಮುಖ ಕೊಂಡಿಯಾಗಿದೆ. ದೀರ್ಘಾವಧಿಯ ವರೆಗೆ ಈ ದಾಖಲೆಗಳ ಸರಿಯಾದ ನಿರ್ವಹಣೆ ಮತ್ತು ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದ್ದು, ಭೂ ಸುರಕ್ಷಾ ಯೋಜನೆಯ ಮೂಲಕ ಭೂದಾಖಲೆಗಳನ್ನು ಸಂರಕ್ಷಿಸಿ ಅದನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ. ಈ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಾಂಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪಲೋಡ್ ಮಾಡಲಾಗುವ ಕಾರ್ಯದಲ್ಲಿ ನಾನ್ ಪೈಲಟ್ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ತಹಶೀಲ್ದಾರ ಕಚೇರಿಯ ಅಭಿಲೇಖಾಲಯದಲ್ಲಿರುವ ಎ ಮತ್ತು ಬಿ ವರ್ಗದ (ಎ ವರ್ಗದ ದಾಖಲೆಗಳು ಶಾಶ್ವತವಾಗಿರುತ್ತದೆ ಹಾಗೂ ಬಿ ವರ್ಗದ ದಾಖಲೆಗಳು 30 ವರ್ಷಗಳ ಕಾಲ ಸಂರಕ್ಷಿಸಲ್ಪಡುತ್ತದೆ.) ದಾಖಲೆಗಳಾದ ಕೈಬರಹ ಪಹಣಿ ,ಮ್ಯುಟೇಶನ್ ವಹಿ, ಭೂಮಂಜೂರಾತಿ ಕಡತಗಳು, ಭೂಪರಿವರ್ತನೆ ಕಡತಗಳು, ಭೂಸುಧಾರಣೆ ಕಡತಗಳನ್ನು ನವೀನ ತಂತ್ರಜ್ಞಾನ ಒಳಗೊಂಡ ಸ್ಕ್ಯಾನರ್‌ಗಳನ್ನು ಬಳಸಿ ಸದರಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಮಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪಲೋಡ್ ಮಾಡುವ ಈ ಕಾರ್ಯದಲ್ಲಿ ಹೊನ್ನಾವರ ತಾಲೂಕು ಈವರೆಗೆ 15,57,896 ಪುಟಗಳಷ್ಟು ದಾಖಲೆಗಳನ್ನು ಅಪಲೋಡ್ ಮಾಡಿ ರಾಜ್ಯದಲ್ಲಿಯೇ ಹೆಚ್ಚು ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದ್ದೂ ಈ ಬಗ್ಗೆ ರಾಜ್ಯದ ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆಯ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಸಾರ್ವಜನಿಕರಿಗೆ ಭೂ ದಾಖಲೆಗಳು ಒಂದು ನಿರ್ಣಾಯಕ ದಾಖಲೆಯಾಗಿದ್ದು, ಇದು ಭೂಮಿ, ಆನುವಂಶಿಕತೆ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ನಿರ್ಣಾಯಕವಾಗಿದೆ. ಸಾರ್ವಜನಿಕರಿಗೆ ಅಂತಹ ದಾಖಲೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಒದಗಿಸುವುದು ಬಹಳ ಮುಖ್ಯವಾಗಿದ್ದು, ಪ್ರಸ್ತುತ, ಅಭಿಲೇಖಾಲಯದ ನಿರ್ವಹಣೆಯು ಸಾರ್ವಜನಿಕರಿಗೆ ಅನಾನುಕೂಲತೆಗೆ ಕಾರಣವಾಗುವ ಅನೇಕ ಕೊರತೆಗಳನ್ನು ಹೊಂದಿದೆ. ಸರಿಯಾದ ಸೂಚ್ಯಂಕದ ಕೊರತೆಯಿಂದಾಗಿ ದಾಖಲೆಗಳನ್ನು ಪದೇ ಪದೇ ನಿರ್ವಹಿಸುವುದರಿಂದ ಮತ್ತು ತಪ್ಪಾದ ಸ್ಥಳದಲ್ಲಿ ಇಡುವುದರಿಂದ ಪ್ರಮುಖ ದಾಖಲೆಗಳ ನಷ್ಠವಾಗುತ್ತದೆ. ಭೂ ದಾಖಲೆಯ ಪ್ರತಿಗಾಗಿ ವಿನಂತಿಯನ್ನು ನೀಡಿದ ನಂತರ ಸಾರ್ವಜನಿಕರು ಬಹಳ ಗಂಟೆಗಳವರೆಗೆ ಮತ್ತು ಕೆಲವು ಸಂದರ್ಭಗಳಲ್ಲಿ ಅನೇಕ ದಿನಗಳವರೆಗೆ ಕಾಯಬೇಕಾಗುತ್ತದೆ. ಸೀಮಿತ ಮಾನವ ಸಂಪನ್ಮೂಲಗಳು ಮತ್ತು ಲಕ್ಷಾಂತರ ದಾಖಲೆಗಳ ನಡುವೆ ದಾಖಲೆಗಳನ್ನು ಹುಡುಕುವ ಸಂಕೀರ್ಣ ಪ್ರಕ್ರಿಯೆಯು ಸಾರ್ವಜನಿಕರಿಗೆ ಅಗತ್ಯವಾದ ದಾಖಲೆಯನ್ನು ಒದಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಹಾಲಿ ಅಸ್ತಿತ್ವದಲ್ಲಿರುವ ಅರ್ಧ ಶತಮಾನಕ್ಕಿಂತಲೂ ಹಳೆಯ ಭೂ ದಾಖಲೆಗಳನ್ನು ಪುನರಾವರ್ತಿತವಾಗಿ ಭೌತಿಕವಾಗಿ ಪ್ರತಿಗಳನ್ನು ಮಾಡಿ ಸಾರ್ವಜನಿಕರಿಗೆ ಒದಗಿಸುವ ಪ್ರಕ್ರಿಯೆಯಿಂದಾಗಿ ಈ ಪ್ರಮುಖ ದಾಖಲೆಗಳಿಗೆ ಹಾನಿ ಮತ್ತು ವಿನಾಶವನ್ನು ಉಂಟುಮಾಡುತ್ತಿದೆ. ಒಂದು ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನಿರ್ದಿಷ್ಟ್ಟ ಹಳ್ಳಿಯ ದಾಖಲೆಗಳಿಗಾಗಿ ವಿನಂತಿಗಳು ಇದ್ದಲ್ಲಿ, ಅದೇ ದಿನದಲ್ಲಿ ಒಂದೇ ರೀತಿಯ ದಾಖಲೆಗಳನ್ನು ಪುನರಾವರ್ತಿತವಾಗಿ ಬಳಸಬೇಕಾಗುತ್ತದೆ. ಅಂತಹ ಅಭ್ಯಾಸಗಳು ಕೆಲವು ಪ್ರಮುಖ ದಾಖಲೆಗಳು ಶಿಥಿಲಗೊಂಡು ನಾಶವಾಗಲು ಕಾರಣವಾಗುತ್ತದೆ. ಭೂ ದಾಖಲೆಗಳನ್ನು ಸುರಕ್ಷಿತವಾಗಿ ಇಡುವುದು ಮತ್ತು ನಿರ್ವಹಿಸುವುದು ಕಂದಾಯ ಇಲಾಖೆಯ ಪ್ರಮುಖ ಜವಾಬ್ದಾರಿ ಕೂಡಾ ಆಗಿದೆ.
ತಂತ್ರಜ್ಞಾನವನ್ನು ಬಳಸಿಕೊಂಡು, ಭೂ ದಾಖಲೆಗಳನ್ನು ಹುಡುಕುವ ಮತ್ತು ಪಡೆಯುವ ಪ್ರಯತ್ನವನ್ನು ಮಾಡಿದ್ದಲ್ಲಿ ಸಾರ್ವಜನಿಕರಿಗೆ ಭೂ ದಾಖಲೆಗಳನ್ನು ತ್ವರಿತವಾಗಿ ಒದಗಿಸಬಹುದು ಮತ್ತು ಅದೇ ಸಮಯದಲ್ಲಿ ಭೌತಿಕ ನಿರ್ವಹಣೆಯ ಸಂದರ್ಭವನ್ನು ಕಡಿಮೆ ಮಾಡುವ ಮೂಲಕ ಭೂ ದಾಖಲೆಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು “ಭೂ ಸುರಕ್ಷಾ” ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಿಂದಾಗಿ , ಮಹತ್ವದ ಭೂದಾಖಲೆಗಳು ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡುತ್ತವೆ. ಪ್ರಸ್ತುತ ದಾಖಲೆಗಳನ್ನು ಭೌತಿಕವಾಗಿ ಪ್ರತಿಗಳನ್ನಾಗಿ ಮಾಡುವುದರಿಂದ ದಾಖಲೆಗಳು ಶಿಥಿಲಗೊಂಡು ನಷ್ಠವಾಗುವ ಸಂಭವವಿದ್ದು ಈ ಯೋಜನೆಯಿಂದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಭೂಸುರಕ್ಷಾ ತಂತ್ರಾಂಶದಲ್ಲಿ ಅಪಲೋಡ್ ಮಾಡುವುದರಿಂದ ಭೌತಿಕ ಕಡತಗಳ ಬಳಕೆ ಕಡಿಮೆಯಾಗಿ ದಾಖಲೆಗಳು ಶಿಥಿಲಗೊಳ್ಳುವ ಯಾವುದೇ ಸಾಧ್ಯತೆಗಳಿರುವುದಿಲ್ಲ. ಸಾರ್ವಜನಿಕರಿಗೆ ಆನ್ ಲೈನ್ ಮೂಲಕವೂ ದಾಖಲೆ ಸಿಗುವುದರಿಂದ ಸಾರ್ವಜನಿಕರು ಭೂದಾಖಲೆಗಳನ್ನು ಪಡೆಯಲು ಕಚೇರಿಗೆ ಅಲೆಯಬೇಕಾಗಿಲ್ಲ. ಸಾರ್ವಜನಿಕರು ಕೋರುವ ದಾಖಲೆಗಳು ಕ್ಷಣಮಾತ್ರದಲ್ಲಿ ಅವರಿಗೆ ಲಭ್ಯವಾಗಲಿದೆ. ಇದರಿಂದಾಗಿ ಸಮಯ, ಹಣ ವ್ಯಯವಾಗುವುದು ತಪ್ಪಿ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಈ ಯೋಜನೆ ನಾಂದಿಯಾಗಲಿದೆ. ಮಹತ್ವದ ದಾಖಲೆಗಳನ್ನು ತಿದ್ದಲು, ಕಳೆಯಲು , ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನೈಜ ದಾಖಲೆಗಳು ಸುಭದ್ರವಾಗಿರುತ್ತದೆ. ಅಭಿಲೇಖಾಲಯವನ್ನು ಕಡಿಮೆ ಸಿಬ್ಬಂದಿಗಳಿಂದ ವ್ಯವಸ್ಥಿತವಾಗಿ ನಿರ್ವಹಿಸಬಹುದು. ಭೂದಾಖಲೆಗಳನ್ನು ಪಡೆಯುವಲ್ಲಿ ಆಗುವ ಭ್ರಷ್ಠ್ಟಾಚಾರವನ್ನು ತಡೆಗಟ್ಟಬಹುದಾಗಿದ್ದು, ತ್ವರಿತ ಸರಳ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ವಿವಿಧ ಜಮೀನು ಸಂಬಂಧಿತ ವ್ಯಾಜ್ಯಗಳಲ್ಲಿ ಮತ್ತು ಅರ್ಜಿಗಳಲ್ಲಿ ದಾಖಲೆಗಳು ಕೂಡಲೇ ಲಭ್ಯವಾಗುವುದರಿಂದ ಕೂಡಲೇ ನಿರ್ಧಾರ ತೆಗೆದುಕೊಂಡು ತ್ವರಿತವಾಗಿ ಪ್ರಕರಣಗಳ ತ್ವರಿತ ವಿಲೇವಾರಿಯಾಗಲು ಸಾಧ್ಯವಾಗುತ್ತದೆ. ದಾಖಲೆಗಳ ಅಲಭ್ಯತೆ ಹಾಗೂ ತಿದ್ದುಪಡಿಯಿಂದ ಸರ್ಕಾರಿ ಜಮೀನು ಭೂಗಳ್ಳರ ಪಾಲಾಗುವುದು ತಪ್ಪುತ್ತದೆ. ದಾಖಲೆಗಳು ಶಿಥಿಲಗೊಂಡ ಕಾರಣದಿಂದಾಗಿ ವಿವಿಧ ಭೂಸಂಬಂಧಿತ ಪ್ರಕರಣಗಳಲ್ಲಿ ಉಂಟಾಗುವ ಅನಾವಶ್ಯಕ ಸಂದೇಹ ಕಡಿಮೆಯಾಗುವುದಲ್ಲದೇ ದಾಖಲೆಗಳ ಕೊರತೆಯಿಂದಾಗಿ ವ್ಯಾಜ್ಯಗಳು ಸೃಷ್ಟಿಯಾಗುವುದು ತಪ್ಪುತ್ತದೆ.
ಈಗಾಗಲೇ ದುರ್ಬಲವಾದ ದಾಖಲೆಗಳ ಭೌತಿಕ ನಿರ್ವಹಣೆಯನ್ನು ಕಡಿಮೆ ಮಾಡಲು ಮತ್ತು ಆ ಮೂಲಕ ಅದನ್ನು ದೀರ್ಘಕಾಲದ ವರೆಗೆ ಉಳಿಸಿಕೊಳ್ಳಲು ಭೂಸುರಕ್ಷಾ ಯೋಜನೆ ಕಾರಣವಾಗುತ್ತದೆ ಈಗ ಇರುವ ಪದ್ದತಿಯಲ್ಲಿ ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರು ಕೋರಿರುವ ದಾಖಲೆ ಅಭಿಲೇಖಾಲಯದಲ್ಲಿ ಲಭ್ಯವಿದ್ದಾಗ್ಯೂ ದಾಖಲೆಗಳನ್ನು ಸಮಗ್ರವಾಗಿ ಶೋಧಿಸಲು ಸಾಧ್ಯವಾಗದೇ ಅಥವಾ ದಾಖಲೆಗಳನ್ನು ತಪ್ಪಾದ ಜಾಗದಲ್ಲಿ ಇಟ್ಟಿರುವುದರಿಂದ ಅದು ಲಭ್ಯವಾಗದೇ ಸಾರ್ವಜನಿಕರಿಗೆ ದಾಖಲೆಗಳ ಅಲಭ್ಯತೆಯ ಬಗ್ಗೆ ಹಿಂಬರಹ ನೀಡಲಾಗುತ್ತಿದೆ. ಆದರೆ ಭೂಸುರಕ್ಷಾ ತಂತ್ರಾಂಶದ ಮೂಲಕ ಸಮಗ್ರ ದತ್ತಾಂಶದಲ್ಲಿ ದಾಖಲೆಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ಒದಗಿಸುವುದರಿಂದ ಸಾರ್ವಜನಿಕರಿಗೆ ದಾಖಲೆಗಳ ಅಲಭ್ಯತೆಯ ಬಗ್ಗೆ ಹಿಂಬರಹ ನೀಡುವ ಸಂದರ್ಭವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ಸೇವಾ ಗುಣಮಟ್ಟವನ್ನು ಹೊಂದಿದ್ದು, ಈ ಯೋಜನೆಯು ಸರಕಾರದ ಮಹತ್ವಾಕಾಂಕ್ಷಿಯ ಯೋಜನೆಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಶಿರಸಿ ತಾಲೂಕಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿಯೂ ಕೂಡ ಈ ಯೋಜನೆ ಆರಂಭವಾಗಿದೆ. ತಹಶೀಲ್ದಾರ ಕಚೇರಿಯ ಅಭಿಲೇಖಾಲಯದಲ್ಲಿರುವ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ , ಭೂಸುರಕ್ಷಾ ತಂತ್ರಾಂಶದಲ್ಲಿ ಇಂಡೆಕ್ಸಿಂಗ್ ಹಾಗೂ ಕ್ಯಾಟಲಾಗಿಂಗ್ ಮಾಡಿ ಅಪಲೋಡ್ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಈ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿದೆ. ಯೋಜನೆಯಿಂದಾ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಕಚೇರಿಗಳಿಗೆ ಅಲೆದಾಡದೇ , ಮನೆಯಲ್ಲಿಯೇ ಕುಳಿತು, ಆನ್‌ಲೈನ್ ಮೂಲಕವೇ ಅತ್ಯಂತ ತ್ವರಿತಗತಿಯಲ್ಲಿ ತಮ್ಮ ಭೂ ದಾಖಲೆಗಳನ್ನುಪಡೆಯಬಹುದಾಗಿದೆ.
ಕೆ. ಲಕ್ಷ್ಮೀಪ್ರಿಯ. ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ